ಬಸ್ ನಿಲ್ದಾಣದ ಕಡೆ ಅನಗತ್ಯವಾಗಿ ಆಟೋ ಸಂಚಾರಕ್ಕೆ ಕ್ರಮ: ಎಸಿಪಿ ಸೂಚನೆ

ಬಸ್ ನಿಲ್ದಾಣದ ಕಡೆ ಅನಗತ್ಯವಾಗಿ ಆಟೋ ಸಂಚಾರಕ್ಕೆ ಕ್ರಮ: ಎಸಿಪಿ ಸೂಚನೆ


ಮೂಡುಬಿದಿರೆ: ನಗರ ಹಾಗೂ ಹೊರವಲಯದ ಆಟೋಗಳನ್ನು ಗುರುತಿಸಲು ನಿಲ್ದಾಣಗಳ ಆಧಾರದಲ್ಲಿ ಸಂಖ್ಯೆ ನೀಡಲಾಗುವುದು. ಸಿಟಿ ಆಟೋಗಳಿಗೆ ಎಂ.ಡಿ.ಬಿ ಗುರುತು ಹಾಗೂ ಸಂಖ್ಯೆ ನೀಡಲಾಗುವುದು. ಆಟೋ ನಿಲ್ದಾಣ, ಆಟೋಗಳ ಸಂಖ್ಯೆ, ಚಾಲನಾ ಪರವಾನಗಿ, ಪರ್ಮಿಟ್, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಮತ್ತು ವಿಮೆ ಪರಿಶೀಲಿಸಿ, ಅನಗತ್ಯವಾಗಿ ಬಸ್ ನಿಲ್ದಾಣದ ಕಡೆ ಆಟೋ ಸಂಚಾರ ಮಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ಎಸಿಪಿ ಖಡಕ್ ಸೂಚನೆ ನೀಡಿದ್ದಾರೆ.

ಪೇಟೆಯ ಸಂಚಾರ ಸಮಸ್ಯೆ ಪರಿಹಾರ ಹಾಗೂ ಟ್ರಾಫಿಕ್ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಮಂಗಳೂರು ಎಸಿಪಿ ಶ್ರೀಕಾಂತ್, ಮೂಡುಬಿದಿರೆ ಪೊಲೀಸ್ ಠಾಣೆಯ ನಿರೀಕ್ಷಕ ರಾಜೇಂದ್ರ ಹಾಗೂ ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಅವರ ನೇತೃತ್ವದಲ್ಲಿ ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ವಿವಿಧ ವಾಹನ ಸಂಘಟನೆಗಳೊಂದಿಗೆ ಮಂಗಳವಾರ ಸಂಜೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ಕಾನೂನನ್ನು ಪಾಲಿಸುವಂತೆ ತಿಳಿಸಿದರು.

ಖಾಸಗಿ ಬಸ್‌ಗಳು ಕಡ್ಡಾಯವಾಗಿ ಬಸ್ ನಿಲ್ದಾಣಕ್ಕೆ ತೆರಳಿ ಪರ್ಮಿಟ್ ಸಮಯ ಪಾಲಿಸಬೇಕು. ಅತಿವೇಗದ ಚಾಲನೆಗೆ ಕಡಿವಾಣ ಹಾಕಿ, ಹಾರ್ನ್‌ಗಳನ್ನು ಪರಿಶೀಲಿಸಲಾಗುವುದು. ಬಸ್ ನಿಲ್ದಾಣದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ನಿಲುಗಡೆಗೆ ಅವಕಾಶವಿಲ್ಲ ಎಂದರು. 

ಭಾರೀ ವಾಹನಗಳನ್ನು ಹೊರವಲಯದ ರಸ್ತೆ ಹಾಗೂ ರಿಂಗ್ ರಸ್ತೆಯ ಮೂಲಕ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗುವುದು. ಪಟ್ಟಣಕ್ಕೆ ಕೆಲಸವಿಲ್ಲದ ವಾಹನಗಳು ರಿಂಗ್ ರಸ್ತೆ ಬಳಸಬೇಕು. ಲಾರಿಗಳು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ನಗರ ಪ್ರದೇಶದೊಳಗೆ ಸಂಚರಿಸುವಂತಿಲ್ಲ.

ಏಕಮುಖ ಸಂಚಾರ, ಪ್ರವೇಶ ನಿಷೇಧ ಸೂಚನಾ ಫಲಕ ಅಳವಡಿಸಿದ ಬಳಿಕ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಮಾಜಿ ಸದಸ್ಯರಾದ ಸುರೇಶ್ ಕೋಟ್ಯಾನ್ ಮತ್ತು ಕೊರಗಪ್ಪ, ಕೆನರಾ ಬಸ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜವರ್ಮ ಬಳ್ಳಾಲ್, ಮೂಡುಬಿದಿರೆ ವಲಯ ಅಧ್ಯಕ್ಷ ನಾರಾಯಣ ಪಿ. ಎಂ., ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಜೀದ್, ಸಂಘದ ಪದಾಧಿಕಾರಿಗಳು, ನಮ್ಮ ಮೂಡುಬಿದಿರೆ ಫೋರಂನ ಅಕ್ಷಯ್ ಕೆ. ಜೈನ್, ಯಾಸಿರ್ ಹಾಗೂ ಮುಖಂಡ ರಾಜೇಶ್ ಕಡಲಕೆರೆ ಉಪಸ್ಥಿತರಿದ್ದರು.

ನಮ್ಮ ಮೂಡುಬಿದಿರೆ ಫೋರಂ ಕೃತಜ್ಞತೆ ಸಲ್ಲಿಸಿದ್ದು, ಸಾರ್ವಜನಿಕರು ಇಲಾಖೆಗಳೊಂದಿಗೆ ಸಹಕರಿಸಿ ಉತ್ತಮ ಮೂಡುಬಿದಿರೆ ನಿರ್ಮಿಸೋಣ ಎಂದು ಎಸಿಪಿ ಮನವಿ ಮಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article