2027ರಲ್ಲಿ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಆರಂಭ: ರಾಜೀವಗಾಂಧಿ ಆರೋಗ್ಯ ವಿವಿ ತಾಂತ್ರಿಕ ತಂಡ ಪರಿಶೀಲನೆ

2027ರಲ್ಲಿ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಆರಂಭ: ರಾಜೀವಗಾಂಧಿ ಆರೋಗ್ಯ ವಿವಿ ತಾಂತ್ರಿಕ ತಂಡ ಪರಿಶೀಲನೆ


ಪುತ್ತೂರು: ಪುತ್ತೂರಿನ ಹಳೆ ಕೋರ್ಟ್ ಕಟ್ಟಡದಲ್ಲಿ ಮುಂದಿನ 2027ರ ಡಿಸೆಂಬರ್ ತಿಂಗಳಲ್ಲಿ 50 ವೈದ್ಯಕೀಯ ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭವಾಗಲಿದೆ. ಪುತ್ತೂರು ಮೆಡಿಕಲ್ ಕಾಲೇಜು ಆರಂಭಕ್ಕೆ ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹೆಸರಲ್ಲಿ ಈಗಾಗಲೇ ಎಲ್ಲಾ ರೀತಿಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಹಳೆಕೋರ್ಟಿನಲ್ಲಿ ಮೂಲಭೂತ ಸೌಕರ್ಯಕ್ಕಾಗಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ತಾಂತ್ರಿಕ ತಂಡ ಪರಿಶೀಲನೆ ನಡೆಸಿ ಅನುಮತಿಗಾಗಿ ಅರ್ಜಿ ಹಾಕಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. 

ಅವರು ಮೆಡಿಕಲ್ ಕಾಲೇಜು ಆರಂಭದ ದೃಷ್ಟಿಯಿಂದ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪರಿಶೀಲನೆಗಾಗಿ ಪುತ್ತೂರಿಗೆ ಆಗಮಿಸಿದ ರಾಜೀವ ಗಾಂಧಿ ಆರೋಗ್ಯ ವಿವಿಯ ತಾಂತ್ರಿಕ ತಂಡದ ಜತೆಗೆ ಹಳೆ ಕೋರ್ಟ್ ಕಟ್ಟಡ ಪರಿಶೀಲನೆ ನಡೆಸಿ ಪತ್ರಕರ್ತರ ಜತೆ ಮಾತನಾಡಿದರು.

ಮೊದಲೇ ವರ್ಷ ಪುತ್ತೂರಿನ ಹಳೆ ಕೋರ್ಟ್ ಕಟ್ಟಡದಲ್ಲಿ 50 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಅವರನ್ನು 2ನೇ ವರ್ಷಕ್ಕೆ ಬನ್ನೂರಿನಲ್ಲಿ ಪೂರ್ಣಗೊಂಡ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ವರ್ಗಾಯಿಸಲಾಗುತ್ತದೆ. ಈ ಕುರಿತು ಈಗಾಗಲೇ ಸಿಎಂ ಸಹಿತ ಉಸ್ತುವಾರಿ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರ ಅನುಮತಿ ಪಡೆಯಲಾಗಿದ್ದು, ಹಳೆ ಕಟ್ಟಡದಲ್ಲಿ ಕಾಲೇಜಿನ ನಾಲ್ಕು ವಿಭಾಗಗಳಿಗೆ ಪೂರಕವಾಗಿ ವ್ಯವಸ್ಥೆಗಳಿದ್ದು, ಪರೀಕ್ಷಾ ಕೇಂದ್ರಕ್ಕೂ ಹಾಲ್ ವ್ಯವಸ್ಥೆ ಇರುತ್ತದೆ. ಪುತ್ತೂರಿನ ಕಾಲೇಜಿಗೆ ಹುದ್ದೆಗಳ ಭರ್ತಿಗೂ ಕೂಡ ಕ್ಯಾಬಿನೆಟ್ ಅನುಮತಿ ನೀಡಿದ್ದು, ವೈದ್ಯರು 97, ನರ್ಸಿಂಗ್ ಸಿಬಂದಿ 372, ಪ್ಯಾರಾ ಮೆಡಿಕಲ್ ಕಾಲೇಜು ಸಿಬಂದಿ 182, ಗ್ರೂಪ್ ಡಿ 100,  ಸೆಕ್ಯುರಿಟಿ ಗಾರ್ಡ್ 50 ಹುದ್ದೆಗಳು ಸೇರಿ ಸುಮಾರು 1 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಹೊಸ ವೈದ್ಯಕೀಯ ಕಾಲೇಜು-ಆಸ್ಪತ್ರೆ ಮಾಡುವವರಿಗೆ ರಾಜೀವ ಗಾಂಧಿ ವಿವಿಗೆ ಅರ್ಜಿ ಹಾಕುವುದಕ್ಕೆ ಅ.13 ಕೊನೆಯ ದಿನವಾಗಿದ್ದು, ಅದಕ್ಕೆ ಮೊದಲು ಸಿದ್ಧತೆ ಮಾಡಿಕೊಂಡು ಅರ್ಜಿ ಹಾಕಲಿದ್ದೇವೆ ಎಂದರು.

ಮೆಡಿಕಲ್ ಕಾಲೇಜು ಆರಂಭಗೊಳ್ಳಬೇಕಾದರೆ 220 ಬೆಡ್ ಗಳ ಆಸ್ಪತ್ರೆ ಬೇಕಿದ್ದು, ಪುತ್ತೂರಿನ ಹಾಲಿ ಸರ್ಕಾರಿ ಆಸ್ಪತ್ರೆಯಲ್ಲಿ 120 ಬೆಡ್ ವ್ಯವಸ್ಥೆ ಇರುತ್ತದೆ. ಉಳಿದಂತೆ ಹಳೆ ತಾಲೂಕು  ಕಟ್ಟಡವನ್ನು ನವೀಕರಿಸಿ ಉಳಿದ ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ರೀತಿಯ ನವೀಕರಣದ ವ್ಯವಸ್ಥೆಗಾಗಿ ರೂ.5.73 ಕೋಟಿ ಅನುದಾನ ಮೀಸಲಿರಿಸಲಿದ್ದೇವೆ. ಜತೆಗೆ ಸಿಟಿ ಸ್ಕ್ಯಾನ್ ವ್ಯವಸ್ಥೆ, ಸುಸಜ್ಜಿತ ಬ್ಲಡ್ ಬ್ಯಾಂಕ್ ಕೂಡ ಅನುಷ್ಠಾನಗೊಳ್ಳಲಿದೆ.

ಕಾಲೇಜು ಆರಂಭದ ಸಂದರ್ಭದಲ್ಲಿ ಹಾಸ್ಟೆಲ್ ಗಳು ಕೂಡ ಬೇಕಿದ್ದು, ಸುತ್ತಮುತ್ತಲಿನ ಸರ್ಕಾರಿ ಖಾಲಿ ಕಟ್ಟಡಗಳಲ್ಲಿ 1 ವರ್ಷದ ಮಟ್ಟಿಗೆ ಸರ್ಕಾರದ ಅನುಮತಿ ಪಡೆದುಕೊಂಡು ಹಾಸ್ಟೆಲ್ ವ್ಯವಸ್ಥೆ ಮಾಡಲಿದ್ದೇವೆ. ಬೆಟ್ಟಂಪಾಡಿಯಲ್ಲಿ ಸಿದ್ಧವಿರುವ ಹಾಸ್ಟೆಲ್ ಬಳಕೆ ಮಾಡುವ ಯೋಚನೆ ಇದೆ. ನರ್ಸಿಂಗ್ ಕಾಲೇಜು ಆರಂಭಕ್ಕೂ ಅರ್ಜಿ ಹಾಕುತ್ತಿದ್ದೇವೆ. ಮುಂದಿನ 15 ದಿನಗಳಲ್ಲಿ ರಾಜೀವ ಗಾಂಧಿ ವಿವಿಯವರು ಪುತ್ತೂರಿಗೆ ಭೇಟಿ ನೀಡಲಿದ್ದು, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದವರು ಬರುವಾಗ ಮೂಲಸೌಕರ್ಯ ಅನುಷ್ಠಾನಗೊಳ್ಳಲಿದ್ದು, ಬಳಿಕ ಅವರು ಅನುಮತಿ ನೀಡಲಿದ್ದಾರೆ ಎಂದು ಶಾಸಕರು ವಿವರಿಸಿದರು.

ಪುತ್ತೂರು ಮೆಡಿಕಲ್ ಕಾಲೇಜು ವಿಶೇಷಾಧಿಕಾರಿ ಡಾ.ಲೋಹಿತ್ ಕುಮಾರ್ ಅವರು ಮಾತನಾಡಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾರ್ಗಸೂಚಿಯಂತೆ ವೈದ್ಯಕೀಯ ಕಾಲೇಜು ಆರಂಭಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಬೇಕಿದ್ದು, ಅದಕ್ಕೆ ಬೇಕಾದ ಕಟ್ಟಡಗಳು, ಇತರ ವ್ಯವಸ್ಥೆಗಳ ಕುರಿತು ಪರಿಶೀಲನೆ ಮಾಡುವುದಕ್ಕೆ ತಾಂತ್ರಿಕ ತಂಡ ಆಗಮಿಸಿದೆ. ಕಾಲೇಜಿನ ಜತೆಗೆ 220 ಬೆಡ್ ಆಸ್ಪತ್ರೆಯ ಪರಿಶೀಲನೆ, ಬಾಲಕ-ಬಾಲಕಿಯರ ಹಾಸ್ಟೆಲ್ ಕಟ್ಟಡ ಪರಿಶೀಲಿಸಿ ವರದಿ ಸಿದ್ಧಪಡಿಸಿ ರಾಜೀವ ಗಾಂಧಿ ಆರೋಗ್ಯ ವಿವಿ ಅ. 13ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಎಲ್ಲಾ ರೀತಿಯ ಮೂಲಸೌಕರ್ಯ ಸಿದ್ಧಗೊಂಡ ಬಳಿಕ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಅನುಮತಿಗಾಗಿ ಕಳುಹಿಸಲಿದ್ದು, ಹಿಂದೆ ಬೇರೆ ಭಾಗಗಳಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನೂ ವೈದ್ಯಕೀಯ ಕಾಲೇಜು ಆರಂಭಕ್ಕೆ ಆಯೋಗ ಪರಿಗಣಿಸಿದೆ.

ಪ್ರಸ್ತುತ ಈ ಕಾಲೇಜಿನಲ್ಲಿ ಅನಾಟಮಿ, ಫಿಝಿಯಾಲಜಿ, ಬಯೋಕೆಮೆಸ್ಟ್ರಿ ಹಾಗೂ ಕಮ್ಯೂನಿಟಿ ಮೆಡಿಸಿನ್ ವಿಭಾಗಗಳಿದ್ದು, ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಹಾಕಿ ಡಿಸೆಂಬರ್-ಜನವರಿಯಲ್ಲಿ ಪರಿಶೀಲನೆ ಮಾಡಿಕೊಂಡು ಪರವಾನಿಗೆ ಕೊಡುತ್ತಾರೆ. ಇಲ್ಲದೇ ಇದ್ದರೆ ನ್ಯೂನ್ಯತೆಗಳನ್ನು ಸರಿ ಮಾಡುವುದಕ್ಕೆ ಒಂದು ತಿಂಗಳ ಸಮಯಾವಕಾಶ ನೀಡುತ್ತಾರೆ. 2ನೇ ಹಂತದ ಪರಿಶೀಲನೆಯ ಬಳಿಕ ಎಪ್ರಿಲ್-ಮಾರ್ಚ್ ನಲ್ಲಿ ಅನುಮೋದನೆ ಕೊಟ್ಟ ಬಳಿಕ ಜೂನ್-ಜುಲೈನಲ್ಲಿ ನೀಟ್ ಕೌನ್ಸಿಲ್ ಬಳಿಕ ಕಾಲೇಜು ಪ್ರವೇಶಕ್ಕೆ ಅವಕಾಶ ಸಿಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್ ಡಿ.ಕೆ., ವಿವಿಯ ತಾಂತ್ರಿಕ ತಂಡದಲ್ಲಿ ಡಾ.ಗಂಗಾಧರ್, ಡಾ.ಗಂಗಾಧರ್, ಡಾ.ಅವಿನಾಶ್ ಎಸ್.ಎಸ್, ಡಾ.ಶಶಾಂಕ್ ಕೆ.ಜೆ. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article