ನಗರ ಸೌಂದರ್ಯದ ನಿರ್ಮಾಣ ಶಿಲ್ಪಗಳು ಪೌರಕಾರ್ಮಿಕರು: ಶಾಸಕ ಅಶೋಕ್ ರೈ

ನಗರ ಸೌಂದರ್ಯದ ನಿರ್ಮಾಣ ಶಿಲ್ಪಗಳು ಪೌರಕಾರ್ಮಿಕರು: ಶಾಸಕ ಅಶೋಕ್ ರೈ


ಪುತ್ತೂರು: ನಗರದ ಸ್ವಚ್ಛತೆಯನ್ನು ಕಾಪಾಡುವ ಪೌರಕಾರ್ಮಿಕರ ಕೆಲಸ ಯಾರಿಗೂ ಗೊತ್ತಾಗುವುದಿಲ್ಲ. ಅವರು ನಗರದಲ್ಲಿ ಉತ್ತಮ ವಾತಾವರಣ ನಿರ್ಮಿಸುವ ಕರ್ತೃಗಳು. ನಗರ ಸೌಂದರ್ಯದ ನಿರ್ಮಾಣ ಶಿಲ್ಪಿಗಳು ಪೌರಕಾರ್ಮಿಕರು.  ನಗರದ ಆರೋಗ್ಯದ ಜತೆಗೆ ನಿಮ್ಮ ಕುಟುಂಬದ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು. ನಿಮ್ಮ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸಿ ಗುಣಮಟ್ಟದ ಶಿಕ್ಷಣ ಪಡೆಯುವಂತೆ ಮಾಡಬೇಕು. ಅದಕ್ಕಾಗಿ ಮೊದಲು ನಿಮ್ಮ ಮನೋಭಾವನೆಯನ್ನು ಬದಲಾಯಿಸಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅಶೋಕ್ ರೈ ಅವರು ಹೇಳಿದರು.

ಪುತ್ತೂರು ಪುರಭವನದಲ್ಲಿ ಶನಿವಾರ ನಡೆದ ಪೌರಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಸಾಧಕರಿಗೆ ಸನ್ಮಾನಿಸಿ ಅವರು ಮಾತನಾಡಿದರು.  

ವೇಸ್ಟ್ ಮ್ಯಾನೇಜ್ ಮೆಂಟ್ ಎನ್ನುವುದು ದೇಶಕ್ಕೇ ದೊಡ್ಡ ಸವಾಲು. ಪೌರ ಕಾರ್ಮಿಕರು ಒಂದು ದಿನ ಕೆಲಸ ನಿರ್ವಹಿಸದಿದ್ದರೂ ಪರಿಸ್ಥಿತಿ ಅಧೋಗತಿಗೆ ಹೋಗಬಹುದು. ತಾವು ನಿಭಾಯಿಸುವ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ಸೇವೆ ನೀಡುವ ಪೌರ ಕಾರ್ಮಿಕರ ಶ್ರಮ ಶ್ಲಾಘನೀಯ ಎಂದರು.

ರಾಜ್ಯ ಸರ್ಕಾರ ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಯ ದೃಷ್ಟಿಕೋನದೊಂದಿಗೆ ಹಲವು ಯೋಜನೆಗಳನ್ನು ಅವರಿಗೆ ನೀಡುತ್ತಿದೆ. ರೂ. 35 ಇದ್ದ ಉಪಹಾರ ಭತ್ಯೆಯನ್ನು ರೂ. 75 ಕ್ಕೆ ಏರಿಸಲಾಗಿದೆ. ಅವರ ಮಕ್ಕಳ ಶಿಕ್ಷಣಕ್ಕಾಗಿ ಕೆ.ಪಿ.ಎಸ್. ಮಾದರಿ ಶಾಲೆಗಳನ್ನು ಒದಗಿಸುವ ಭರವಸೆಯನ್ನು ಸರಕಾರ ನೀಡಿದೆ. ವಿಶೇಷ ಭತ್ಯೆಯನ್ನು 7 ಸಾವಿರದಿಂದ 10 ಸಾವಿರಕ್ಕೆ ಏರಿಸಲಾಗಿದೆ ಎಂದು ಹೇಳಿದ ಶಾಸಕರು, ಪುತ್ತೂರಿಗೆ ಅಂಡರ್ ಗ್ರೌಂಡ್ ಡ್ರೈನೇಜ್ ವ್ಯವಸ್ಥೆ ಅತಿ ಅಗತ್ಯವಾಗಿದ್ದು, ಸುಮಾರು 75 ಕೋಟಿಗಳ ಡಿಪಿಆರ್ ತಯಾರಿಸಿ ಸಚಿವರಿಗೆ ಮನವಿ ನೀಡಲಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರು 98.7 ಬಿಗ್ ಎಫ್.ಎಂ.ನ ಆರ್‌ಜೆ ನಯನ ಶೆಟ್ಟಿ ಮಾತನಾಡಿ, ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಕಾರ್ಮಿಕರು ಸಮಸ್ಯೆ ಹೇಳಿಕೊಳ್ಳದೆ ಇರುವುದೂ ದೊಡ್ಡ ಸಮಸ್ಯೆ. ಸಂಪರ್ಕ ಎಂಬುದು ಸಂಪತ್ತು. ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದೂ ಅತಿ ಅಗತ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ವಿಜಯ ಹಾರ್ವಿನ್ ಮಾತನಾಡಿ, ಪರಿಸರ ಸ್ವಚ್ಛ ಇಟ್ಟುಕೊಳ್ಳುವವರು ನಿಜವಾದ ದೇಶ ಪ್ರೇಮಿಗಳು. ಪೌರ ಕಾರ್ಮಿಕ ಕೆಲಸವನ್ನು ಪ್ರೀತಿಸುತ್ತಾನೆ. ಶ್ರಮ, ಕೆಲಸದಿಂದ ಬರುವ ನೋವುಗಳನ್ನು ಮೌನವಾಗಿ ಅನುಭವಿಸುವ ಪೌರ ಕಾರ್ಮಿಕರ ಕಷ್ಟವನ್ನು ಸಮಾಜ ಮತ್ತು ಸರಕಾರ ಅರಿತುಕೊಳ್ಳಬೇಕು ಎಂದು ಹೇಳಿದರು.

ಮುಳಿಯ ಗ್ರೀನ್ ಎನರ್ಜಿ ಸಂಸ್ಥೆಯ ಮುಖ್ಯಸ್ಥ ಕೃಷ್ಣ ನಾರಾಯಣ ಮುಳಿಯ ಮಾತನಾಡಿದರು. ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ ರೈ, ಲೆಕ್ಕ ಅಧೀಕ್ಷಕ ರಾಮಚಂದ್ರ ಸಾಗರ ಅತಿಥಿಗಳನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಶಾಸಕ ಆಶೋಕ್ ರೈ ಅವರು ಸನ್ಮಾನಿಸಿ ಗೌರವಿಸಿದರು. ನಿವೃತ್ತ ಪೌರ ಕಾರ್ಮಿಕ ನಾರಾಯಣ ಸಪಲ್ಯ ಅವರನ್ನು ಸನ್ಮಾನಿಸಲಾಯಿತು. ಸಿಎನ್‌ಜಿ ಘಟಕ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಕೃಷ್ಣ ನಾರಾಯಣ ಮುಳಿಯ ಅವರನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.  

ಪೌರಾಯುಕ್ತೆ ವಿದ್ಯಾ ಕಾಳೆ ಸ್ವಾಗತಿಸಿದರು.  ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು.

ಅನುದಾನ ಪಾರ್ಕ್ ನುಂಗಿತ್ತಾ..!

ನಗರಸಭೆ ವ್ಯಾಪ್ತಿಯಲ್ಲಿ ಪಾರ್ಕ್ ನಿರ್ಮಾಣ ಹಾಗೂ ನಿರ್ವಹಣೆಗೆ ಸುಮಾರು 1 ಕೋಟಿಯಷ್ಟು ಹಣ ಬರುತ್ತಿದೆ. ಆದರೆ ಯಾವ ಪಾರ್ಕ್‌ಗಳು ಸಮರ್ಪಕವಾಗಿಲ್ಲ. ವರ್ಷಂಪ್ರತಿ ಬರುವ ಈ ಹಣವನ್ನು ಪಾರ್ಕ್‌ಗಳೇ ನುಂಗಿದ್ಯಾ ಅಥವಾ ಇದಕ್ಕೆ ಸಂಬಂಧಿಸಿದವರು ನುಂಗಿದ್ದಾರೆಯೋ ಗೊತ್ತಿಲ್ಲ. ಆದರೆ ಪಾರ್ಕಿನಲ್ಲಿ ಸೌಂದರ್ಯಕರಣ ಕಂಡುಬರುತ್ತಿಲ್ಲ. ಹಾಗಾಗಿ ಈ ಬಾರಿ ಪಾರ್ಕಿಗೆ ಬರುವ ಎಲ್ಲಾ ಅನುದಾನವನ್ನು ಬಿರುಮಲೆ ಗುಡ್ಡೆಯಲ್ಲಿ ಒಂದೇ ಪಾರ್ಕಿನ ನಿರ್ಮಾಣಕ್ಕೆ ಬಳಸಲು ತಿಳಿಸಿದ್ದೇನೆ ಎಂದು ಶಾಸಕರು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article