ಯುವಕ ಸಾವು ವಿದ್ಯುತ್ ಅವಘಡ ಶಂಕೆ..!
Friday, September 18, 2026
ಪುತ್ತೂರು: ಯುವಕನೋರ್ವ ಮನೆಯಂಗಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ ಕೆಮ್ಮಾಯಿ ಬಡಾವು ಎಂಬಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಬಡಾವು ನಿವಾಸಿ ಮೆಡಿಕಲ್‌ವೊಂದರಲ್ಲಿ ಉದ್ಯೋಗಿಯಾಗಿದ್ದ ರಕ್ಷಿತ್ (29) ಎಂದು ಗುರುತಿಸಲಾಗಿದೆ. ರಕ್ಷಿತ್ ಅವರು ಮನೆಯಲ್ಲಿ ವಾಹನ ತೊಳೆಯುತ್ತಿದ್ದ ಸಂದರ್ಭ ವಿದ್ಯುತ್ ಅವಘಡ ಸಂಭವಿಸಿ ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಮನೆಯವರು ಹೊರಗಡೆ ತೆರಳಿದ್ದ ಕಾರಣ ಘಟನೆ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ.
ರಕ್ಷಿತ್ ಮನೆಯಂಗಳದಲ್ಲಿ ಬಿದ್ದಿರುವುದನ್ನು ಗಮನಿಸಿದ ನೆರೆಯವರು ಕೂಡಲೇ ಇತರರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದರು. ಆದರೆ ಅದಾಗಲೇ ಮೃತಪಟ್ಟಿದ್ದರು. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.