ವೀರಯೋಧ ಚಂದ್ರಶೇಖರ ಪೂಜಾರಿ ಅವರಿಗೆ ಹುಟ್ಟೂರಲ್ಲಿ ಸಾರ್ವಜನಿಕ ಸನ್ಮಾನ ಹಾಗೂ ತಿರಂಗಾ ಜಾಥಾ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಅವರು, ಯಾವುದೇ ಜಾತಿ, ಮತ, ಭೇದವಿಲ್ಲದೇ ಎಲ್ಲರೂ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಯಾರನ್ನೂ ವಿರೋಧಿಸಿ ಬದುಕಲು ಧರ್ಮ ಕಲಿಸಿಲ್ಲ. ಎಲ್ಲರನ್ನೂ ಅರ್ಥ ಮಾಡಿಕೊಂಡು ಬದುಕಬೇಕು. ಬದುಕು ಮೂರೇ ದಿನ, ಇದರ ನಡುವೆ ಪರ-ವಿರೋಧ ಏಕೆ? ಪ್ರತಿಯೊಬ್ಬ ತಾಯಿಯ ಮಗ ದೇಶದ ಸೈನಿಕನಾಗಬೇಕು. ಯೋಧನಾಗುವುದು ದೇಶದ ಎಲ್ಲ ವರ್ಗದ ಜನರ ರಕ್ಷಣೆಗಾಗಿಯೇ ಹೊರತು ಆತನ ಸ್ವಾರ್ಥಕ್ಕಲ್ಲ ಎಂದರು.
ಪೆರುವಾಯಿ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಧರ್ಮಗುರು ಜಾಫರ್ ಸ್ವಾದಿಖ್ ಬಾಖವಿ ಅಲ್ ಯಮಾನಿ ಮಾತನಾಡಿ, ಯೋಧರು ತಮ್ಮ ಸರ್ವಸ್ವವನ್ನೂ ಸಮರ್ಪಿಸಿ ನಮಗಾಗಿ ಗಡಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಅಂತಹ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವೆಲ್ಲರೂ ಜೊತೆಯಾಗಿ ಕೂಡಿ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ಸೈಮನ್ ಡಿ’ಸೋಜ ಮಾತನಾಡಿ, ಇದು ಯಾವುದೇ ಒಂದು ಜಾತಿ ಅಥವಾ ಧರ್ಮದ ಕಾರ್ಯಕ್ರಮವಲ್ಲ, ಇದೊಂದು ಮಾನವೀಯತೆಯ ಹಬ್ಬ. ನಾವಿಲ್ಲಿ ಸೇರಿರುವುದು ನಮ್ಮ ಭಾರತದ ಮಣ್ಣಿನ ಹೆಮ್ಮೆಯ ಮಗನನ್ನು ಗೌರವಿಸುವ ಪವಿತ್ರ ಉದ್ದೇಶದಿಂದ ಎಂದು ಹೇಳಿದರು. ಪೆರುವಾಯಿ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಶರೀಫ್ ಮದನಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬಳಿಕ ಸಾರ್ವಜನಿಕ ಸನ್ಮಾನ ಸಮಿತಿ, ಪೆರುವಾಯಿ ಚರ್ಚ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ವೀರಯೋಧ ಚಂದ್ರಶೇಖರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರಯೋಧ ಚಂದ್ರಶೇಖರ ಪೂಜಾರಿ, ಈ ಗೌರವ ಕೇವಲ ನನಗೆ ಸಂದಿದ್ದಲ್ಲ. ಇದು ನಮ್ಮ ದೇಶದ ತ್ರಿವರ್ಣ ಧ್ವಜಕ್ಕೆ ಮತ್ತು ದೇಶ ಕಾಯುವ ಪ್ರತಿಯೊಬ್ಬ ಸೈನಿಕನಿಗೂ ಸಲ್ಲುವ ಗೌರವವಾಗಿದೆ. ನಾನು ದೇಶ ಸೇವೆಗೆ ಹೊರಟಾಗ ಇಲ್ಲಿನ ಪ್ರತಿಯೊಬ್ಬ ಜನರೂ ನನ್ನ ಬೆನ್ನುತಟ್ಟಿ ಕಳುಹಿಸಿಕೊಟ್ಟದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಕೃಷ್ಣ ಪ್ರಸಾದ್ ಕಡೆಂಬಿಲ್ಲ, ಯೋಧನ ತಾಯಿ ಸುಂದರಿ, ಧರ್ಮಪತ್ನಿ ವಿದ್ಯಾಶ್ರೀ, ರಾಜೇಂದ್ರ ರೈ ಪೆರುವಾಯಿ ಗುತ್ತು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಹಿಮಾನ್ ಕಾನ ಸ್ವಾಗತಿಸಿದರು. ನೌಫಲ್ ಕೆ.ಬಿ.ಎಸ್. ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿ, ಜಿ. ಎಸ್. ಕುಮಾರ್ ಸನ್ಮಾನ ಪತ್ರ ವಾಚಿಸಿದರು.