ಮುಸ್ಲಿಂ ಯುವತಿಗೆ ಧರ್ಮದ ಕಾರಣ ನೀಡಿ ವಸತಿ ನಿರಾಕರಣೆ: ಕೃಷ್ಣ ಮಠದ ವಸತಿಗೃಹದ ನಡೆಗೆ ಡಿವೈಎಫ್ಐ ಖಂಡನೆ
ಬೆಂಗಳೂರು: ಉಡುಪಿ ಶ್ರೀಕೃಷ್ಣ ಮಠದ ವಸತಿಗೃಹದಲ್ಲಿ ತಂಗಲು ತೆರಳಿದ್ದ ಹಿಂದೂ ಕುಟುಂಬದೊಂದಿಗೆ ಬಂದಿದ್ದ ಮುಸ್ಲಿಂ ಯುವತಿಗೆ ಆಕೆಯ ಧರ್ಮದ ಕಾರಣ ನೀಡಿ ವಸತಿ ನಿರಾಕರಿಸಲಾಗಿರುವ ಘಟನೆಯನ್ನು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಅಕ್ಟೋಬರ್ 3ರಂದು ರಾಯಚೂರು ಮೂಲದ ಹಿಂದೂ ಕುಟುಂಬದ ಸ್ನೇಹಿತೆಯೊಂದಿಗೆ ಉಡುಪಿಗೆ ಪ್ರವಾಸಕ್ಕೆ ಬಂದಿದ್ದ ಯುವತಿ, ದೇವಸ್ಥಾನದಲ್ಲಿ ಪ್ರಾರ್ಥನೆ ಮುಗಿಸಿ ರಾತ್ರಿ ವಾಸ್ತವ್ಯಕ್ಕಾಗಿ ಕೃಷ್ಣ ಮಠದ ವಸತಿಗೃಹಕ್ಕೆ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ವಸತಿಗಾಗಿ ಬಂದವರ ಆಧಾರ್ ಕಾರ್ಡ್ ಪರಿಶೀಲಿಸುವ ಸಂದರ್ಭದಲ್ಲಿ ಯುವತಿ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬ ಕಾರಣ ನೀಡಿ ವಸತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ ಎನ್ನಲಾಗಿದೆ.
ರಾತ್ರಿ ತಡವಾಗಿದ್ದು, ಯುವತಿ ಹೊಸ ಊರಿನಲ್ಲಿ ಒಬ್ಬರೇ ತೆರಳುವುದು ಸುರಕ್ಷಿತವಲ್ಲ ಎಂಬುದನ್ನು ಸ್ನೇಹಿತೆಯ ಕುಟುಂಬದವರು ಮನವರಿಕೆ ಮಾಡಿಕೊಟ್ಟರೂ ವಸತಿ ನೀಡಲು ಅವಕಾಶ ಮಾಡಿಕೊಡಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕಾಗಿದೆ ಹಾಗೂ ತಪ್ಪಿತಸ್ಥನ ಮೇಲೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ ಆಗ್ರಹಿಸಿದೆ.
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯವಿಲ್ಲದೆ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಧಾರ್ಮಿಕ ನಂಬಿಕೆಗಳು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದ್ದರೂ, ಸಾರ್ವಜನಿಕರಿಗೆ ವಸತಿ ಅಥವಾ ಇತರ ಸೌಲಭ್ಯಗಳನ್ನು ಒದಗಿಸುವ ಸಂದರ್ಭದಲ್ಲಿ ಕೇವಲ ಧರ್ಮದ ಆಧಾರದ ಮೇಲೆ ತಾರತಮ್ಯ ನಡೆಯದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ಉಡುಪಿ ಶ್ರೀಕೃಷ್ಣ ಮಠವು ಕರ್ನಾಟಕದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದೆ. ಉಡುಪಿಯ ಧಾರ್ಮಿಕ ಪರಂಪರೆಯಲ್ಲಿ ವಿವಿಧ ಸಮುದಾಯಗಳ ನಡುವಿನ ಸೌಹಾರ್ದತೆಯ ಹಲವು ನಿದರ್ಶನಗಳಿವೆ. ದಿವಂಗತ ಹಾಜಿ ಅಬ್ದುಲ್ಲಾ ಸಾಹೇಬ್ ಅವರು ಮಠದ ಭಕ್ತರಾಗಿದ್ದರೆಂಬ ಉಲ್ಲೇಖವೂ ಇದೆ. ಪೇಜಾವರ ಮಠದ ದಿವಂಗತ ವಿಶ್ವೇಶತೀರ್ಥ ಶ್ರೀಗಳೂ ವಿವಿಧ ಸಂದರ್ಭಗಳಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದ ಉದಾಹರಣೆಗಳು ಸಾರ್ವಜನಿಕವಾಗಿ ದಾಖಲಾಗಿವೆ.
ಇಂತಹ ಸೌಹಾರ್ದ ಪರಂಪರೆಯನ್ನು ಹೊಂದಿರುವ ಉಡುಪಿಯಲ್ಲಿ ಧರ್ಮದ ಆಧಾರದ ಮೇಲೆ ವಸತಿ ನಿರಾಕರಿಸಲಾಗಿರುವ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು. ಇಂತಹ ಘಟನೆಗಳು ಸಮಾಜದಲ್ಲಿ ಅನಗತ್ಯ ಆತಂಕ ಮತ್ತು ವಿಭಜನೆಯ ಭಾವನೆಗೆ ಕಾರಣವಾಗುವ ಸಾಧ್ಯತೆ ಇದೆ.
ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಬದಲು ಕರ್ನಾಟಕದ ಬಹುಸಂಸ್ಕೃತಿಯ ಪರಂಪರೆ, ಸೌಹಾರ್ದತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಎಲ್ಲರ ಜವಾಬ್ದಾರಿಯಾಗಿದೆ.
ಘಟನೆಯ ಕುರಿತು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ, ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು. ಧರ್ಮದ ಆಧಾರದ ಮೇಲೆ ತಾರತಮ್ಯ ನಡೆದಿರುವ ಈ ಪ್ರಕರಣದ ವಿರುದ್ಧ ಅಗತ್ಯ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಇಂತಹ ಘಟನೆಗಳು ಇನ್ನು ಮುಂದೆ ಮರುಕಳಿಸದಂತೆ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.