ಶಕ್ತಿ ತುಂಬುವ ಸವಾಲಿನ ಸಮಯ: ಕ್ಯಾ. ಸಂಸದ ಚೌಟ

ಶಕ್ತಿ ತುಂಬುವ ಸವಾಲಿನ ಸಮಯ: ಕ್ಯಾ. ಸಂಸದ ಚೌಟ


ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರು ತನ್ನ 25 ವರ್ಷದ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕ ಆಡಳಿತ ಮತ್ತವರ ಜೀವನದ ಯಶಸ್ಸನ್ನು ಸ್ಮರಿಸುವುದರ ಜತೆಗೆ ದೇಶದ ಮುಂದಿನ ಹಂತದ ಅಭಿವೃದ್ಧಿಯ ಸಂಕಲ್ಪನ್ನು ಇನ್ನಷ್ಟು ಬಲಪಡಿಸುವ ಮತ್ತು ಕಾರ್ಯಕರ್ತರಿಗೂ ಶಕ್ತಿ ತುಂಬುವ ಸವಾಲಿನ ಸಮಯವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಬಂಟ್ವಾಳದ ಬಂಟರ ಭವನದಲ್ಲಿ ಬುಧವಾರ ನಡೆದ ‘ವಿಕಸಿತ ಭಾರತ ಸಂಕಲ್ಪ ಸಭೆ-ಸೇವಾಜ್ಯೋತಿ’ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉದಾತ್ತವಾದ ಧ್ಯೇಯೋದ್ದೇಶದಿಂದ ಸ್ಥಾಪನೆಯಾದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾದ ಪ್ರಧಾನಿ ನರೇಂದ್ರ ಮೋದಿಯವರಂತ ವಿಶ್ವನಾಯಕ ಕಳಂಕರಹಿತವಾಗಿ ಸಾರ್ವಜನಿಕ ಜೀವನದಲ್ಲಿ ೨೫ ವರ್ಷ ಪೂರೈಸಿರುವುದು ಪ್ರತಿಯೋರ್ವ ಬಿಜೆಪಿ ಕಾರ್ಯಕರ್ತನಿಗೂ ಸಂತಸ, ಸಂಭ್ರಮ, ಸಡಗರದ ಹಾಗೂ ಹೆಮ್ಮೆಯ ಸಂಗತಿಯು ಆಗಿದೆ ಎಂದರು.

ರಾಜ್ಯ ಸರಕಾರದ ವಿರುದ್ಧ ಟೀಕಾಪ್ರಹಾರ:

ತಮ್ಮ ಭಾಷಣದುದ್ದಕ್ಕು ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಟೀಕಿಸಿದ ಸಂಸದ ಚೌಟ ಅವರು ಹಿಂದುತ್ವ  ಹಾಗೂ ಭಾಷೆಯ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ನಡೆ ದ್ವಂದ್ವ ನಿಲುವಿನಿಂದ ಕೂಡಿದೆ ಎಂದು ಆರೋಪಿಸಿದರಲ್ಲದೆ ಅವಿಭಜಿತ ದ.ಕ.ಜಿಲ್ಲೆ ಯಾವತ್ತಿದ್ದರೂ ಹಿಂದುತ್ವದ ಭದ್ರಕೋಟೆಯಾಗಿಯೇ ಉಳಿಯಲಿದೆ ಎಂದರು.

ವಂದೇ ಮಾತರಂ ಗೀತೆಯನ್ನು ತುಂಡರಿಸಿರುವ ಸಿಎಂ. ಡಿ.ಕೆ. ಶಿವಕುಮಾರ್ ಅವರ ಮಾನಸಿಕತೆಯ ವಿರುದ್ದ ವಾಗ್ದಾಳಿ ನಡೆಸಿದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿಶ್ಚಿತವಾಗಿ ಅಧಿಕಾರಕ್ಕೆ ಬರಲಿದ್ದು, ಆಗ ವಂದೇಮಾತರಂ ಗೀತೆಯನ್ನು ಪೂರ್ತಿಯಾಗಿ ಹಾಡುವ ಕಾನೂನು ಜಾರಿಗೆ ತರಲಾಗುವುದು ಎಂದರು.

ಎಸ್‌ಐಆರ್ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಕೆಲಸ ಕಾಂಗ್ರೆಸ್ ಸರಕಾರದಿಂದ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರು ಯಾವುದೇ ರೀತಿಯ ಭಯಕ್ಕೆ ಒಳಗಾಗದೆ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಜಿಲ್ಲೆಯ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಕ್ಷದ ವತಿಯಿಂದ ಹೋರಾಟಗಳನ್ನು ನಡೆಸಲಾಗುವುದು ಇದಕ್ಕೆ ಕಾರ್ಯಕರ್ತರ ಸಹಕಾರ ಅಗತ್ಯವಿದೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಬಿಎಲ್‌ಒಗಳಿಗೆ ಅನಗತ್ಯ ಒತ್ತಡ ಅಥವಾ ಭಯದ ವಾತಾವರಣ ನಿರ್ಮಾಣವಾಗಬಾರದು, ಚುನಾವಣಾ ಪ್ರಕ್ರಿಯೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಬಿಜೆಪಿ ನಂಬಿಕೆ ಹೊಂದಿದೆ ಎಂದ ಸಂಸದ ಚೌಟ ಅವರು ಮತದಾರರ ಪಟ್ಟಿಯಲ್ಲಿ ಅರ್ಹ ಭಾರತೀಯ ಮತದಾರರ ಹೆಸರುಗಳು ಮಾತ್ರ ಇರಬೇಕು. ಈ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷವೂ ಮತಬ್ಯಾಂಕ್ ರಾಜಕಾರಣಕ್ಕೆ ಮುಂದಾಗಬಾರದು ಎಂದು ಹೇಳಿದರು.

ವಿ ವಿಲ್ ಡೂ ಇಟ್:

2028ರ ವಿಧಾನಸಭಾ ಚುನಾವಣೆಯಲ್ಲಿ ನೈಜ ಮತದಾರರ ಬೆಂಬಲದೊಂದಿಗೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ ದ.ಕ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಪಣ ತೊಡಬೇಕು. ಮನೆಮನೆಗೆ ಸೇವಾಜ್ಯೋತಿ ತಲುಪಬೇಕು ಎಂದು ಕರೆ ನೀಡಿದರಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಅಶಯದಂತೆ ‘ವಿ ವಿಲ್ ಡೂ ಇಟ್’ ಎಂದು ಘೋಷಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಮಿನಿ ಮೋದಿಗಳಾಗಬೇಕು: 

ಮಾಜಿ ಸಚಿವ, ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಮಾತನಾಡಿ, 2047ರ ವಿಕಸಿತ ಭಾರತದ ಕನಸು ನನಸಾಗಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ದೇಶ ಸೇವೆ ಮುಂದುವರಿಸುವ ಶಕ್ತಿ ದೊರೆಯಲಿ ಎಂಬುದು ಪ್ರತಿಯೊಬ್ಬ ಕಾರ್ಯಕರ್ತನ ಆಶಯವಾಗಬೇಕು ಎಂದರು.

‘ಮೋದಿಯವರ ಕನಸು ನನಸಾಗಬೇಕಾದರೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೂ ತಮ್ಮ ಕ್ಷೇತ್ರದಲ್ಲಿ ಮಿನಿ ಮೋದಿ ರೀತಿಯಲ್ಲಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಐದು ವರ್ಷದಲ್ಲಿ 250 ಸಂಪುಟ ಸಭೆಗಳಾಗುತ್ತವೆ, ಅದರಲ್ಲಿ ಚರ್ಚಿಸಿದ, ಘೋಷಿಸಿದ ಯಾವುದೇ ಯೋಜನೆಗಳು ಕಾರ್ಯಗತಗೊಂಡು ಉದ್ದಾರವಾದ ನಿದರ್ಶನವಿಲ್ಲ, ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಿದ ಯೋಜನೆ, ಅನುದಾನದ ಬಗ್ಗೆಯು ಈಗ ಪ್ರಶ್ನೆ ಎದ್ದಿದೆ.ಜಿಲ್ಲೆಯ ಜನತೆ ದಡ್ಡರಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಧಾನಸಭೆ ಚುನಾವಣೆ ಮಾತ್ರವಲ್ಲ ಮುಂದಿನ ಗ್ರಾಮ ಪಂಚಾಯಿತಿ, ತಾ.ಪಂ., ಜಿ.ಪಂ. ಹಾಗೂ ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ ಚುನಾವಣೆಲ್ಲಿಯೂ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷವನ್ನು ಬಲಪಡಿಸುವ ಸಂಕಲ್ಪ ಮಾಡಬೇಕು ಎಂದರು.

ಜಿಲ್ಲಾ ಪ್ರ.ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಅವರು ಸೇವಾ ಸಂಕಲ್ಪ ಪ್ರತಿಜ್ಞೆ ಬೋಧಿಸಿದರು.

ಮಾಜಿ ಸಚಿವ ಎಸ್. ಅಂಗಾರ, ಶಾಸಕರಾದ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ವೇದವ್ಯಾಸ ಕಾಮತ್, ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಪ್ರಭಾರಿ ಭರತೀಶ್, ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಆರ್.ಸಿ. ನಾರಾಯಣ, ಮಾಜಿ ಶಾಸಕರಾದ ಅರುಣ್ ಶಹಾಪುರ, ಪ್ರತಾಪಸಿಂಹ ನಾಯಕ್, ಸಂಜೀವ ಮಠಂದೂರು, ರುಕ್ಕಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿಲ್ಲೆಯ ಬಿಜೆಪಿ ಮಂಡಲಗಳ ಅಧ್ಯಕ್ಷರುಗಳಾದ ರಮೇಶ್, ರಾಜೇಶ್ ಕೊಟ್ಟಾರಿ, ಶ್ರೀನಿವಾಸ್ ರಾವ್, ಜಗದೀಶ್ ಆಳ್ವ, ದಯಾನಂದ ಶೆಟ್ಟಿ ಉಜಿರೆಮಾರ್, ಶಿವಕುಮಾರ್, ದಿನೇಶ್ ಪುತ್ರನ್, ವೆಂಕಟ್ ವಳಲಂಬೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಯತೀಶ್ ಅರ್ವಾರ್ ಸ್ವಾಗತಿಸಿದರು. ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ ವಂದಿಸಿ, ರಾಕೇಶ್ ರೈ ಕಡೆಂಜ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article