ಮೋಟರ್ ಸೈಕಲ್ ಢಿಕ್ಕಿ: ಗಾಯಾಳು ಹಿರಿಯ ಟೈಲರ್ ಮೃತ್ಯು
ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಕಡೆಗೋಳಿ ಜಂಕ್ಷನ್‌ನಲ್ಲಿ ಗುರುವಾರ ರಸ್ತೆ ದಾಟುತ್ತಿದ್ದ ವೇಳೆ ಮೋಟಾರ್ ಸೈಕಲ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃತ್ತಿಯಲ್ಲಿ ಟೈಲರ್ ಆಗಿರುವ ಕೇಶವ ಭಂಡಾರಿ (72) ಅವರು ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.
ಪೆಲಪಾಡಿ ನಿವಾಸಿಯಾಗಿದ್ದ ಕೇಶವ ಭಂಡಾರಿ ಅವರು ಟೈಲರಿಂಗ್ ವೃತ್ತಿ ನಡೆಸುತ್ತಿದ್ದು, ಗುರುವಾರ ಬೆಳಗ್ಗೆ ಎಂದಿನಂತೆ ಮನೆಯಿಂದ ತನ್ನ ಅಂಗಡಿಗೆ ತೆರಳುತ್ತಿದ್ದಾಗ ಕಡೆಗೋಳಿ ಜಂಕ್ಷನ್‌ನಲ್ಲಿ ಡಿವೈಡರ್ ದಾಟುತ್ತಿದ್ದ ವೇಳೆ ಬಿ.ಸಿ.ರೋಡು ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಮೋಟಾರ್ ಸೈಕಲ್ ಢಿಕ್ಕಿ ಹೊಡೆದಿತ್ತು.
ಪರಿಣಾಮ ರಸ್ತೆಗೆ ಬಿದ್ದ ಅವರ ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಅವರನ್ನು ಸ್ಥಳೀಯರು ಹಾಗೂ ಮೋಟಾರ್ ಸೈಕಲ್ ಸವಾರರು ತುಂಬೆ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಕೇಶವ ಟೈಲರ್ ಅವರು ಪುದು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯೆ, ಬಿಜೆಪಿ ಕಾರ್ಯಕರ್ತೆ ವಸಂತಿ ಭಂಡಾರಿ ಅವರ ಪತಿಯಾಗಿದ್ದು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.