ಲೆಕ್ಕಪರಿಶೋಧನಾ ಆಕ್ಷೇಪಣೆಗಳ ಕುರಿತು ಸಮಗ್ರ ತನಿಖೆಗೆ ಆಗ್ರಹ
ಬಂಟ್ವಾಳ: ಇಲ್ಲಿ ಪುರಸಭೆಯಲ್ಲಿ 2024-25ನೇ ಸಾಲಿನ ಲೆಕ್ಕಪರಿಶೋಧನಾ ಆಕ್ಷೇಪಣೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು, ಜಿಎಸ್ಟಿ ವಿಳಂಬದಿಂದ ಉಂಟಾದ 8,54,528 ರೂ. ಬಡ್ಡಿಯ ಹೊರೆಗೆ ಕಾರಣರಾದವರ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಸಹಿತ ವಿವಿಧ ಬೇಡಿಕೆಯನ್ನು 30 ದಿನದ ಒಳಗಾಗಿ ಈ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಪೌರಡಳಿತ ಇಲಾಖೆಯನ್ನು ಒತ್ತಾಯಿಸಿ ಮನವಿಮಾಡಲಾಗಿದೆ ಎಂದು ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಆಲಿ ಪೊನ್ನೋಡಿ ತಿಳಿಸಿದ್ದಾರೆ.
ಸೋಮವಾರ ಬಂಟ್ವಾಳ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಟೆಂಡರ್ ಪ್ರಕ್ರಿಯೆಯ ಆಕ್ಷೇಪಣೆಗಳ ಕುರಿತು ದಾಖಲೆಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆ ದೃಢಪಟ್ಟರೆ ಕ್ರಮ ಕೈಗೊಳ್ಳಬೇಕು, ಹಿಂದಿನ ಸಮಗ್ರ ನೀರು ಸರಬರಾಜು ಯೋಜನೆ ಹಾಗೂ ಅಮ್ಮತ್ 2.0 ಯೋಜನೆಯ ಮಂಜೂರಾತಿ, ಹಣ ಬಿಡುಗಡೆ, ವೆಚ್ಚ ಮತ್ತು ಕಾಮಗಾರಿಗಳ ಪ್ರಗತಿಯ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನೀರು ಸೋರಿಕೆ ಮತ್ತು ನೀರಿನ ಕೊರತೆಯ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಬೇಕು, ಬಿ.ಸಿ.ರೋಡ್ ವ್ರತ್ತದ ರಸ್ತೆ ಸುರಕ್ಷತಾ ಪರಿಶೀಲನೆ ನಡೆಸಿ ಅಪಘಾತ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಪಾರ್ಕಿಂಗ್, ಬೀದಿದೀಪ, ಪಾದಚಾರಿ ಸುರಕ್ಷತೆ ಮತ್ತು ಕಸ ನಿರ್ವಹಣೆಗೆ ಸಮಗ್ರ ಕಾರ್ಯಯೋಜನೆ ರೂಪಿಸಬೇಕು, ಲೆಕ್ಕಪರಿಶೋಧನಾ ಆಕ್ಷೇಪಣೆಗಳಿಗೆ ನೀಡಿರುವ ಉತ್ತರಗಳು ಹಾಗೂ ಕೈಗೊಂಡ ಕ್ರಮಗಳ ವರದಿಯನ್ನು ಸಾರ್ವಜನಿಕರಿಗೆ ಲಭ್ಯವಾಗಿಸಬೇಕು ಎಂದು ಅವರು ಈ ಸಂದರ್ಭ ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೂ ಈಗಾಗಲೇ ಮನವಿ ಸಲ್ಲಿಸಿ ಚರ್ಚಿಸಲಾಗಿದೆ ಮತ್ತು ಪೌರಾಡಳಿತ ಇಲಾಖೆಗೂ ಮನವಿಯನ್ನು ಸಲ್ಲಿಸಲಾಗಿದೆ ಇದರ ಬಗ್ಗೆ ತನಿಖೆ ನಡೆಸಿ 30 ದಿನಗಳೊಳಗೆ ಪ್ರಾಥಮಿಕ ಪರಿಶೀಲನಾ ವರದಿ ಪ್ರಕಟಿಸುವಂತೆ ಆಗ್ರಹಿಸಲಾಗಿದೆ ಎಂದರು.
ಜನರು ಪಾವತಿಸಿದ ತೆರಿಗೆಯ ಪ್ರತಿಯೊಂದು ರೂಪಾಯಿಗೂ ಆಡಳಿತ ಲೆಕ್ಕ ಕೊಡಬೇಕು, ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ನೈಜ ಪ್ರಯೋಜನ ಪ್ರತಿಯೊಬ್ಬ ನಾಗರಿಕನಿಗೂ ತಲುಪಬೇಕು, ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಎಸ್ಡಿಪಿಐ ಮುಖಂಡರಾದ ಶಾಹುಲ್ ಹಮೀದ್ ಎಸ್.ಎಚ್., ಶರೀಫ್ ವಳವೂರು, ಅನ್ನರ್ ಕೆ.ಎಚ್., ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು.