ಟಿ.ಟಿ.ಇ ಸಮಯಪ್ರಜ್ಞೆ, ಕಾಣೆಯಾಗಿದ್ದ ಪ್ರಯಾಣಿಕನ ಲ್ಯಾಪ್ ಟಾಪ್ ಸಹಿತ ಅಮೂಲ್ಯ ವಸ್ತು ಪತ್ತೆ: ವಾರೀಸುದಾರರಿಗೆ ಹಸ್ತಾಂತರ

ಟಿ.ಟಿ.ಇ ಸಮಯಪ್ರಜ್ಞೆ, ಕಾಣೆಯಾಗಿದ್ದ ಪ್ರಯಾಣಿಕನ ಲ್ಯಾಪ್ ಟಾಪ್ ಸಹಿತ ಅಮೂಲ್ಯ ವಸ್ತು ಪತ್ತೆ: ವಾರೀಸುದಾರರಿಗೆ ಹಸ್ತಾಂತರ


ಬಂಟ್ವಾಳ: ರೈಲಿನಲ್ಲಿ ಕಾಣೆಯಾದ ಪ್ರಯಾಣಿಕೊರೋರ್ವರ ಲ್ಯಾಪ್ ಟಾಪ್ ಸಹಿತ ಅಮೂಲ್ಯ ವಸ್ತುಗಳು ಕರ್ತವ್ಯನಿರತ ಟಿ.ಟಿ.ಇ.ಯ ಸಮಯಪ್ರಜ್ಞೆ ಮತ್ತು ಎಚ್ಚರಿಕೆಯ ನಡೆಯಿಂದ ಪತ್ತೆಯಾಗಿದ್ದು, ವಾರಸುದಾರರಿಗೆ ಹಸ್ತಾಂತರಿಸಿರುವ ಘಟನೆ ನಡೆದಿದೆ.


ಹೊಳೆನರಸೀಪುರದಿಂದ ಮಂಗಳೂರು ಜಂಕ್ಷನ್‌ಗೆ ರೈಲು ಸಂಖ್ಯೆ 16585ರಲ್ಲಿ ಪ್ರಯಾಣಿಸುತ್ತಿದ್ದ ಅಭಿಷೇಕ್ ಎಂಬವರ ಲ್ಯಾಪ್‌ಟಾಪ್ ಬ್ಯಾಗ್ ಪ್ರಯಾಣದ ವೇಳೆ ಬರ್ತ್‌ನಿಂದ ಕಾಣೆಯಾಗಿತ್ತು.

ಬ್ಯಾಗ್‌ನಲ್ಲಿ ಸುಮಾರು 80 ಸಾವಿರ ಮೌಲ್ಯದ ಲೆನೊವೊ ಲ್ಯಾಪ್‌ಟಾಪ್, ಚಾರ್ಜರ್, ಬಂಗಾರದ ಸರ, ಕೈಗಡಿಯಾರ ಹಾಗೂ ಗುರುತಿನ ಚೀಟಿಗಳಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಹೊಳೆನರಸೀಪುರ ಮತ್ತು ಸಕಲೇಶಪುರ ನಡುವೆ ಬ್ಯಾಗ್ ಕಾಣೆಯಾಗಿರುವ ಕುರಿತು ಪ್ರಯಾಣಿಕರು ಶಂಕಿಸಿದ್ದರಾದರೂ ನಿಖರವಾಗಿ ಎಲ್ಲಿಂದ ಬ್ಯಾಗ್ ಕಾಣೆಯಾಗಿದೆ ಎಂಬುದು ಸ್ಪಷ್ಟವಾಗಿರಲಿಲ್ಲ.

ಈ ನಡುವೆ ರೈಲು ಸಂಖ್ಯೆ 17302 (ಬೆಳಗಾವಿ-ಮೈಸೂರು)ರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಚಲನವಲನದ ಬಗ್ಗೆ ಕರ್ತವ್ಯದಲ್ಲಿದ್ದ ಟಿಟಿಇ ಚಂದ್ರ ನಾಯಕ್ ಅವರಿಗೆ ಅನುಮಾನ ಮೂಡಿದ್ದು, ಎಚ್ಚರಿಕೆಯಿಂದ ಪರಿಶೀಲನೆ ನಡೆಸಿದ ಅವರು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ಕೆ.ಆರ್.ನಗರ ಆರ್‌ಪಿಎಫ್ ಔಟ್‌ಪೋಸ್ಟ್‌ಗೆ ಹಸ್ತಾಂತರಿಸಿದ್ದರು.

ವಿಚಾರಣೆ ವೇಳೆ ಅನುಮಾನಾಸ್ಪದ ವ್ಯಕ್ತಿ ಹೊಳೆನರಸೀಪುರ-ಹಾಸನ ನಡುವಿನ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಸಂಖ್ಯೆ 16585ರಿಂದ ಲ್ಯಾಪ್‌ಟಾಪ್ ಬ್ಯಾಗ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ ರೈಲ್ವೆ ಪ್ರಕಟಣೆ ತಿಳಿಸಿದೆ. ವಶಕ್ಕೆ ಪಡೆದಿರುವ ವ್ಯಕ್ತಿಯನ್ನು ಬಸವರಾಜ ಎಂದು ಹೆಸರಿಸಲಾಗಿದೆ.

ಹೆಚ್ಚಿನ ತನಿಖೆಗಾಗಿ ಆತನನ್ನು ಕೆ.ಆರ್. ನಗರ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಠಾಣೆಗೆ ಹಸ್ತಾಂತರಿಸಲಾಗಿದೆ. ಪತ್ತೆಯಾದ ವಸ್ತುಗಳನ್ನು ಸೂಕ್ತ ಪರಿಶೀಲನೆ ನಡೆಸಿ ವಾರಸುದಾರರ ದೃಢೀಕರಣದ ಬಳಿಕ ಪ್ರಯಾಣಿಕರಿಗೆ ಹಸ್ತಾಂತರಿಸಲಾಗಿದೆ.

ಟಿಟಿಇ ಚಂದ್ರ ನಾಯಕ್ ಅವರ ಸಮಯಪ್ರಜ್ಞೆ ಹಾಗೂ ಎಚ್ಚರಿಕೆಯನ್ನು ನೈಋತ್ಯ ರೈಲ್ವೆ ಶ್ಲಾಘಿಸಿದೆ.

ಪ್ರಯಾಣಿಕರು ಪ್ರಯಾಣದ ವೇಳೆ ತಮ್ಮ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು,ವಸ್ತು ಕಳೆದುಹೋದರೆ ಅಥವಾ ಕಳ್ಳತನವಾದರೆ, ಯಾವುದೇ ಭದ್ರತಾ ಸಮಸ್ಯೆ ಎದುರಾದರೆ ತಕ್ಷಣ ರೈಲ್‌ಮದದ್ (139) ಮೂಲಕ ದೂರು ನೀಡುವಂತೆ ಅಥವಾ ಸಮೀಪದ ರೈಲ್ವೆ ಸಿಬ್ಬಂದಿ/ಆರ್‌ಪಿಎಫ್ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article