ಅ.11 ರಂದು ‘ಆಟೋಕ್ರಾಸ್-2026’ ಸ್ಪರ್ಧೆ
ಮಂಗಳೂರು: ಮಂಗಳೂರು ಮೋಟಾರ್ ಸ್ಪೋಟ್ಸ್ ಅಸೋಸಿಯೇಶನ್(ಎಂಎಂಎಸ್‌ಎ) ವತಿಯಿಂದ ಕಾರ್ ರೇಸಿಂಗ್ ಪ್ರಿಯರಿಗೆ ರೋಚಕ ಅನುಭವ ನೀಡಲಿರುವ ‘ಆಟೋಕ್ರಾಸ್-2026’ ಸ್ಪರ್ಧೆ ಅ.11 ರಂದು ಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ನಡೆಯಲಿದೆ ಎಂದು ಎಂಎಂಎಸ್‌ಎ ಅಧ್ಯಕ್ಷ ಸುಧೀರ್ ಬಿ.ಕೆ. ಹೇಳಿದರು.
ಸ್ಪರ್ಧೆಯಲ್ಲಿ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕೊಡಗು, ಮೂಡುಬಿದಿರೆ ಸೇರಿದಂತೆ ನಾನಾ ಭಾಗಗಳಿಂದ ಸುಮಾರು 120ಕ್ಕೂ ಅಧಿಕ ಚಾಲಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಒಟ್ಟು 13 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಗೋಲ್ಡ್‌ಫಿಂಚ್ ಸಿಟಿ ಆವರಣದಲ್ಲಿ ಸುಮಾರು 2 ಕಿ.ಮೀ. ಉದ್ದದ ವಿಶೇಷ ಟ್ರ್ಯಾಕ್ ನಿರ್ಮಿಸಲಾಗಿದ್ದು, ತಿರುವುಗಳು ಹಾಗೂ ನಾನಾ ಸವಾಲುಗಳನ್ನು ಒಳಗೊಂಡಿರುವ ಈ ಮಾರ್ಗದಲ್ಲಿ ಚಾಲಕರು ತಮ್ಮ ವೇಗ ಹಾಗೂ ಚಾಲನಾ ಕೌಶಲ ಪ್ರದರ್ಶಿಸಲಿದ್ದಾರೆ. ಪ್ರೇಕ್ಷಕರು ಚಾಲಕರ ನಿಖರತೆ, ವೇಗ ಮತ್ತು ಕಾರುಗಳ ಸಾಮರ್ಥ್ಯವನ್ನು ಸಮೀಪದಿಂದ ವೀಕ್ಷಿಸಲು ಅವಕಾಶವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸ್ಪರ್ಧೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕಾರ್ ಡಿಸ್‌ಪ್ಲೇ ಅಂದು ಬೆಳಗ್ಗೆ 9 ರಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ. ವಿವಿಧ ಮಾದರಿಯ ರೇಸಿಂಗ್ ಕಾರುಗಳನ್ನು ಸಮೀಪದಿಂದ ವೀಕ್ಷಿಸಲು ಕಾರು ಪ್ರಿಯರಿಗೆ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದ ವೇಗದ ಚಾಲಕರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ‘ಫಾಸ್ಟೆಸ್ಟ್ ಡ್ರೈವರ್ ಮ್ಯಾನ್’, ‘ಫಾಸ್ಟೆಸ್ಟ್ ಡ್ರೈವರ್ ವುಮನ್’ ಹಾಗೂ ‘ಬೆಸ್ಟ್ ಟ್ಯೂನರ್’ ಪ್ರಶಸ್ತಿಗಳು ವಿಶೇಷವಾಗಿವೆ. ಇದರ ಜತೆಗೆ ಪ್ರಥಮ ಬಹುಮಾನ 70 ಸಾವಿರ ರೂ., ದ್ವಿತೀಯ ಬಹುಮಾನ 50 ಸಾವಿರ ರೂ ಹಾಗೂ ತೃತೀಯ ಬಹುಮಾನ 30 ಸಾವಿರ ರೂ. ಇರಲಿದ್ದು, ಸ್ಪರ್ಧಿಗಳು 4500 ನೊಂದಣಿ ಶುಲ್ಕ ಪಾವತಿಸಬೇಕಿದೆ ಎಂದರು.
ರಾಷ್ಟ್ರೀಯ ಮೋಟಾರ್ ಸ್ಪೋಟ್ಸ್ ಚಾಲಕ ವಿಕ್ರಂ ರಾವ್ ಆರೂರು, ಎಂಎಂಎಸ್‌ಎಯ ಕಾರ್ಯದರ್ಶಿ ಅಶ್ವಿನ್ ನಾಯಕ್ ಮತ್ತು ಹರೀಶ್ ಸುವರ್ಣ ಉಪಸ್ಥಿತರಿದ್ದರು.