ಬೆಳೆ ವಿಮೆ ಯೋಜನೆಯಲ್ಲಿ ರೈತರಿಗೆ ಅನ್ಯಾಯ, ಸರಿಪಡಿಸದಿದ್ದಲ್ಲಿ ಹೋರಾಟ: ತುಂಗಪ್ಪ ಬಂಗೇರ ಎಚ್ಚರಿಕೆ
ಮಂಗಳವಾರ ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತಾಲೂಕಿನ ಒಂದೊಂದು ಗ್ರಾಮಕ್ಕೆ ಒಂದೊಂದು ರೀತಿಯಲ್ಲಿ ವಿಮೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಅತೀ ಕಡಿಮೆ ಮಳೆ, ವಿಪರೀತ ತಾಪಮಾನ ಇತ್ಯಾದಿಗಳಿಂದಾಗಿ ಬರಪೀಡಿತ ತಾಲೂಕುಗಳು ಎಂದು ಸರಕಾರದಿಂದ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಬೆಳೆ ವಿಮೆ ಪರಿಹಾರ ಬರಬಹುದು ಯೋಚನೆಯಿಂದ ಯೋಜನೆ ಹಾಕಿ ನಿರೀಕ್ಷೆಯಲ್ಲಿದ್ದ ಅದೆಷ್ಟೋ ಮಂದಿ ರೈತರನ್ನು ಈ ಜುಜುಬಿ ಪರಿಹಾರದಿಂದ ಕಂಗೆಡಿಸಿದೆ ಎಂದರು.
ಈ ನಿಟ್ಟಿನಲ್ಲಿ ಕೃಷಿ ಇಲಾಖೆ, ಸಂಬಂಧಪಟ್ಟ ಅಧಿಕಾರಿಗಳು ಬೆಳೆ ಹಾನಿಯ ಮರು ಸಮೀಕ್ಷೆ ನಡೆಸಬೇಕು ಹಾಗೂ ರೋಗ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳಬೇಕು ಮತ್ತು ರೈತರಿಗೆ ನ್ಯಾಯೋಚಿತವಾದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ತುಂಗಪ್ಪ ಬಂಗೇರ ಅವರು ಪ್ರತಿ ಗ್ರಾಮ ಮಟ್ಟದಲ್ಲಿ ರೈತರನ್ನು ಸಂಘಟಿಸಿ ತಾಲೂಕು ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರಕಾರದ ವಿರುದ್ಧ ವಾಗ್ದಾಳಿ:
ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕರ್ನಾಟಕ ಸರಕಾರ ವೃದ್ಧಾಪ್ಯ,ವಿಧವಾ ವೇತನ,ಸಾಮಾಜಿಕ ಭದ್ರತಾ ಸೌಲಭ್ಯವನ್ನು ಸ್ಥಗಿತಗೊಳಿಸಿರುವುದರಿಂದ ಆರ್ಹ ಫಲಾನುಭವಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಬಂಟ್ವಾಳ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ನಡೆಯದೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, 1ಟು5 ಸಹಿತ ಖಾತಾ ಬದಲಾವಣೆಗೆ ಅರ್ಜಿ ಕೊಟ್ಟ 8 ತಿಂಗಳಾದರೂ ವಿಲೇವಾರಿಯಾಗುತ್ತಿಲ್ಲ,ಇತ್ತೀಚೆಗೆ ಆರಂಭವಾದ ಪ್ರಜಾಸೇವೆ ಕಾಟಾಚಾರಕ್ಜೆ ನಡೆಯುತ್ತಿದ್ದು ಅರ್ಜಿಕೊಟ್ಟು 21 ದಿನ ಕಳೆದರೂ ಇನ್ನು ಇತ್ಯರ್ಥವಾಗಿಲ್ಲ,ಇದು ಪ್ರಚಾರಸೇವೆಯಾಗಿದೆ ಎಂದು ಲೇವಡಿ ಮಾಡಿದರು.
ಚುನಾವಣೆ ಮಾಡಿ:
ಜಿ.ಪಂ., ತಾ.ಪಂ. ಸಹಿತ ಸ್ಥಳೀಯಾಡಳಿತ,ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇನ್ನು ಚುನಾವಣೆ ನಡೆಸಲು ಸರಕಾರ ಆಸಕ್ತಿ ತೋರುತ್ತಿಲ್ಲ, ಶಾಸಕರೋ, ಸಂಸದರಿಗೆ ಇಂತಹ ಪರಿಸ್ಥಿತಿ ಬಂದರೆ ಸುಮ್ಮನಿರುತ್ತಾರೆಯೇ?. ಯಾವುದೇ ರೀತಿಯಲ್ಲದರೂ ಒತ್ತಡ ಹಾಕಿ ಅವಧಿಗೆ ಮೊದಲೇ ಚುನಾವಣೆ ನಡೆಸಲಾಗುತ್ತದೆ. ಆದರೆ ಸಂವಿಧಾನಬದ್ದವಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸರಕಾರ ಮೀನಾನೇಷ ನಡೆಸುವುದು ಸರಿಯಲ್ಲ ಎಂದ ಅವರು ಈ ಕೂಡಲೇ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ಕರಾವಳಿ ಭಾಗಕ್ಕೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಗ್ರಾಮೀಣ ಭಾಗಕ್ಕೆ ಮಾತ್ರ ಈ ಅನುದಾನ ತಲುಪುತ್ತಿಲ್ಲ, ಗ್ರಾಮೀಣ ರಸ್ತೆಗಳ ದುರಸ್ಥಿ, ಕಿಂಡಿ ಅಣೆಕಟ್ಟು, ಕೃಷಿ ಸಹಿತ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಸರಕಾರ ಅನುದಾನ ಬಿಡುಗಡೆ ಮಾಡುವ ಮೂಲಕ ಗಮನಹರಿಸಬೇಕು ಎಂದರು.
ಎಸ್‌ಐಅರ್ ಹೆಸರಿನಲ್ಲಿ ಮುಖ್ಯಮಂತ್ರಿಯವರು ಪ್ರತಿಭಟನೆಗೆ ಕುಳಿತುಕೊಳ್ಳುವುದನ್ನು ಬಿಟ್ಟು ಕೃಷಿ ಕ್ಷೇತ್ರದ ಸಮಸ್ಯೆಯನ್ನು ಅರಿತುಕೊಂಡು ಅಗತ್ಯವಾದ ಸಹಾಯಧನ, ತಾಂತ್ರಿಕ ನೆರವನ್ನು ಒದಗಿಸಬೇಕು, ಸಂಕಷ್ಟದಲ್ಲಿರುವ ರೈತರ ಸಾಲಮನ್ನಾಕ್ಕೆ ಸರಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪುಂಜಾಲಕಟ್ಟೆಯಲ್ಲಿ ನಾರಾಯಣಗುರು ವಸತಿ ಶಾಲೆ ನಿರ್ಮಾಣಕ್ಕೆ ಜಮೀನು ಮಂಜೂರು ಗೊಳಿಸಿರುವುದನ್ನು ಸ್ವಾಗತಿಸಿದ ಅವರು ಇದನ್ನು ಕೇವಲ ಕಟ್ಟಡ ನಿರ್ಮಾಣಕ್ಕೆ ಸೀಮಿತಗೊಳಿಸದೆ ಜ್ಞಾನ, ಶಿಕ್ಷಣ, ಸಂಸ್ಕೃತಿಯ ಕೇಂದ್ರವಾಗುವ ನಿಟ್ಟಿನಲ್ಲಿ ಜ್ಞಾನಂಮದಿರ ನಿರ್ಮಿಸಲು ಸರಕಾರ ಮುಂದಾಗಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸೊಸೈಟಿಗಳ ಅಧ್ಯಕ್ಷ ಸತೀಶ್ ಬಂಗೇರ, ತಾರನಾಥ್ ಕಜೆಕಾರ್, ಯಶವಂತ, ಕರುಣೇಂದ್ರ ಪೂಜಾರಿ ಉಪಸ್ಥಿತರಿದ್ದರು.