ರಾಜ್ಯ ಸರಕಾರದ ಆಡಳಿತ ವೈಫಲ್ಯವನ್ನು ಖಂಡಿಸಿ ಪ್ರತಿಭಟನೆ: ಸಮಸ್ಯೆ ಬಗೆಹರಿಸದಿದ್ದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆಯ ಎಚ್ಚರಿಕೆ

ರಾಜ್ಯ ಸರಕಾರದ ಆಡಳಿತ ವೈಫಲ್ಯವನ್ನು ಖಂಡಿಸಿ ಪ್ರತಿಭಟನೆ: ಸಮಸ್ಯೆ ಬಗೆಹರಿಸದಿದ್ದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆಯ ಎಚ್ಚರಿಕೆ


ಬಂಟ್ವಾಳ: ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರಕಾರ ಇದೀಗ ಇನ್ನಿಲ್ಲದ ಮಾನದಂಡಗಳನ್ನು ವಿಧಿಸುವ ಮೂಲಕ  ಯೋಜನೆಯನ್ನು ರದ್ದುಗೊಳಿಸುವ ಹುನ್ನಾರ ನಡೆಸುತ್ತಿರುವುದು ಹಾಗೂ ಆಡಳಿತ ವೈಫಲ್ಯವನ್ನು ಖಂಡಿಸಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಜಿ.ಪಂ. ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ ಅವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 2025-26ನೇ ಸಾಲಿಗೆ ಸಂಬಂಧಿಸಿದಂತೆ ವಿಮಾ ಕಂಪೆನಿಯು ವಿಮಾ ಪರಿಹಾರ ನೀಡುವಲ್ಲಿ ಬಂಟ್ವಾಳ ತಾಲೂಕಿನಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಿದ್ದು, ರೈತರಿಗೆ ತೀರಾ ಅನ್ಯಾಯವಾಗಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿದರು.

ತಾಲೂಕಿನ ಒಂದೊಂದು ಗ್ರಾಮಕ್ಕೆ ಒಂದೊಂದು ರೀತಿಯಲ್ಲಿ ವಿಮೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವ ಮೂಲಕ ರೈತರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿದ ಅವರು ಗರಿಷ್ಠ ಪ್ರಮಾಣದಲ್ಲಿ ಬೆಳೆ ವಿಮೆ ಪರಿಹಾರ ಬರಬಹುದು ನಿರೀಕ್ಷೆಯಲ್ಲಿದ್ದ ಅದೆಷ್ಟೋ ಮಂದಿ ರೈತರನ್ನು ಜುಜುಬಿ ಪರಿಹಾರದಿಂದ ಕಂಗೆಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಇಲಾಖೆ, ಸಂಬಂಧಪಟ್ಟ ಅಧಿಕಾರಿಗಳು ಬೆಳೆ ಹಾನಿಯ ಮರು ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ ತುಂಗಪ್ಪ ಬಂಗೇರ ಅವರು ಇಲ್ಲದಿದ್ದಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ರೈತರನ್ನು ಸಂಘಟಿಸಿ ಶೀಘ್ರವೇ ಬಂಟ್ವಾಳ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ತೀವ್ರಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸರಕಾರದ ವಿರುದ್ಧ ವಾಗ್ದಾಳಿ:

ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕರ್ನಾಟಕ ಸರಕಾರ ಇದೀಗ ಜನರನ್ನೇ ಮರೆತಿದೆ. ವೃದ್ಧಾಪ್ಯ, ವಿಧವಾ ವೇತನ, ಸಾಮಾಜಿಕ ಭದ್ರತಾ ಸೌಲಭ್ಯವನ್ನು ಸ್ಥಗಿತಗೊಳಿಸಿರುವುದರಿಂದ ಆರ್ಹ ಫಲಾನುಭವಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಬಂಟ್ವಾಳ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ನಡೆಯದೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, 1-5 ಸಹಿತ ಖಾತಾ ಬದಲಾವಣೆಗೆ ಅರ್ಜಿ ಕೊಟ್ಟ 8 ತಿಂಗಳಾದರೂ ವಿಲೇವಾರಿಯಾಗುತ್ತಿಲ್ಲ, 9-11 ಗಾಗಿ ಅರ್ಜಿದಾರರು ಮಂಗಳೂರಿಗೆ ಅಲೆದಾಡಬೇಕಾಗಿದೆ ಎಂದು ರಾಜ್ಯ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ನಾಗರಿಕ ಹಿತರಕ್ಷಣಾ ಸಮಿತಿ ವಲಯಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್ ಅವರು ಮಾತನಾಡಿ, ಸರಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸ್ಥಳೀಯಾಡಳಿತ ಸಂಸ್ಥೆಯ  ಚುನಾವಣೆ ಮಾಡಲು ಮೀನಾಮೇಷ ಎಣಿಸುತ್ತಿದೆ.ಗ್ರಾಮೀಣ ಭಾಗದ ರಸ್ತೆ ದುರಸ್ಥಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜನರು ನಿಕಟ ಪೂರ್ವ ಸದಸ್ಯರ ಗಮನಸೆಳೆಯುತ್ತಿದ್ದಾರೆ. ಸರಕಾರ ಶಾಸಕರಿಗೂ ಅನುದಾನ ಬಿಡುಗಡೆ ಮಾಡದಿರುವುದರಿಂದ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದು, ಸರಕಾರದ ಗಮನಸೆಳೆಯಲು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಹರೀಂದ್ರ ಪೈ, ಪ್ರಮುಖರಾದ ಶೇಖರ ಪೂಜಾರಿ ಅಗಲ್ದೋಡಿ, ಬೂಬ ಸಫಲ್ಯ, ರವಿ ಶಂಕರ ಹೊಳ್ಳ, ಶಶಿಧರ ನಾಯ್ಕ, ಸುಂದರ ನಾಯ್ಕ ಗಂಗಾಧರ ಪೂಜಾರಿ ಕಜೆಕಾರು,ತಾರಾನಾಥ ಕಜೆಕಾರು, ಚಂದ್ರಶೇಖರ ಶೆಟ್ಟಿ ಕುಮಂಗಿಲ, ಮಹಾಬಲ ಪುರಿಯ, ನಾರಾಯಣ ಪೂಜಾರಿ, ಉಮೇಶ್ ಆಚಾರ್ಯ ಕೈಯ್ಯಬೆ, ಸತೀಶ್ ಕಜೆಕಾರು, ರಮೇಶ್ ಶೆಟ್ಟಿ ಮಜಲೋಡಿ, ಧರ್ಣಪ್ಪ ಶೆಟ್ಟಿ, ಪ್ರವೀಣ್ ಶೆಟ್ಟಿ ಕುರ್ಡುಮೆ, ಸಂಜೀವ ಶೆಟ್ಟಿ, ವೆಂಕಟೇಶ ಶೆಟ್ಟಿ, ಅಬ್ದುಲ್ ರಹಿಮಾನ್ ಎಡ್ತೂರು, ಕಾಂತಪ್ಪ ಕರ್ಕೇರ, ಶೇಷಗಿರಿ, ಜಯಶ್ರೀ, ಪೂರ್ಣಿಮಾ, ಮಮತಾ ಮತ್ತಿತರರು ಭಾಗವಹಿಸಿದ್ದರು.

ಹರೀಶ್ ಶೆಟ್ಟಿ ನಯನಾಡು ಸ್ವಾಗತಿಸಿ, ನಿರೂಪಿಸಿದರು. ಬಳಿಕ ಪಿಲಾತಬೆಟ್ಟು ಗ್ರಾ.ಪಂ. ಪಿಡಿಒ ವನಜಾ ಅವರ ಮೂಲಕ ಸರಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article