ಹಣಕಾಸಿನ ವಿಚಾರ: ಚೂರಿ ಇರಿದು ಕೊಲೆಗೆ ಯತ್ನ
ಬಂಟ್ವಾಳ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದು ಕೊಲೆ ಯತ್ನಿಸಿದ ಘಟನೆ ಬಿ.ಮೂಡ ಗ್ರಾಮದ ಪಲ್ಲಮಜಲು ಜಂಕ್ಷನ್ನಲ್ಲಿ ಶನಿವಾರ ನಡೆದಿದೆ.
ಬಿ.ಮೂಡ ಗ್ರಾಮದ ಕುಪ್ಪಿಲ ನಿವಾಸಿ ಉದಯ್ ಎಂಬವರು ಚೂರಿ ಇರಿತಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜಿತ್ ಕಲ್ಲಗುಡ್ಡೆ ಎಂಬಾತ ಈ ಕೃತ್ಯ ವೆಸಗುದ ಆರೋಪಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಉದಯ್ ಅವರು ಅಜಿತ್ಗೆ ಕೆಲ ಸಮಯದ ಹಿಂದೆ ಹಣ ನೀಡಿದ್ದು, ವಾಪಸ್ ಕೇಳುತ್ತಿದ್ದರೂ ಆತ ನೀಡಿರಲಿಲ್ಲ ಎನ್ನಲಾಗಿದೆ. ಶನಿವಾರ ರಾತ್ರಿ ಪಲ್ಲಮಜಲು ಜಂಕ್ಷನ್ನಲ್ಲಿ ಈ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದರಿಂದ ಸಿಟ್ಟಾದ ಅಜಿತ್, ಉದಯಗೆ ಚೂರಿಯಿಂದ ಹೊಟ್ಟೆಯ ಬಲಭಾಗಕ್ಕೆ ಇರಿದಿದ್ದಾನೆ. ಮತ್ತೊಮ್ಮೆ ಇರಿಯಲು ಯತ್ನಿಸಿದಾಗ ತಡೆದಾಗ ಉದಯ್ ಅವರ ಎಡ ಕೈಗು ಗಾಯವಾಗಿದೆಯೆನ್ನಲಾಗಿದೆ.
ಆಗ ಉದಯ್ ಅವರ ಬೊಬ್ಬೆ ಕೇಳಿ ಸ್ಥಳಕ್ಕಾಗಮಿಸಿದ ತಮ್ಮ ಲೋಕೇಶ್ ಮೇಲೂ ಆರೋಪಿ ಚೂರಿ ಇರಿಯಲು ಯತ್ನಿಸಿದ್ದಾನೆನ್ನಲಾಗಿದೆ.
ಇರಿತದಿಂದ ಗಂಭೀರವಾಗಿ ಗಾಯಗೊಂಡ ಉದಯ್ ಅವರನ್ನು ಸ್ಥಳೀಯರು ಆಟೋರಿಕ್ಷಾದಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಲೋಕೇಶ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.