ಗುರುಪುರ ಹೋಬಳಿಗೆ ಸಮುದಾಯ ಆಸ್ಪತ್ರೆಗೆ ಆಗ್ರಹಿಸಿ ಗಂಜಿಮಠದಲ್ಲಿ ಹೋರಾಟ ಸಮಿತಿಯಿಂದ ಧರಣಿ

ಗುರುಪುರ ಹೋಬಳಿಗೆ ಸಮುದಾಯ ಆಸ್ಪತ್ರೆಗೆ ಆಗ್ರಹಿಸಿ ಗಂಜಿಮಠದಲ್ಲಿ ಹೋರಾಟ ಸಮಿತಿಯಿಂದ ಧರಣಿ


ಗುರುಪುರ: ಗುರುಪುರ ಹೋಬಳಿಗೆ ಸಮುದಾಯ ಆಸ್ಪತ್ರೆ ಮಂಜೂರು ಮಾಡಬೇಕು, ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು ಹಾಗು ಸರಕಾರಿ ಆಸ್ಪತ್ರೆಗಳ ಬಲವರ್ಧನೆಯ ಹಲವು ಬೇಡಿಕೆಗಳನ್ನು ಮುಂದಿಟ್ಟು `ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ' ವತಿಯಿಂದ ಗಂಜಿಮಠ ಜಂಕ್ಷನ್‌ನಲ್ಲಿ ಸಾಮೂಹಿಕ ಧರಣಿ ನಡೆಯಿತು.

ಸಾಮೂಹಿಕ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ರಾಜ್ಯ ಸರಕಾರಕ್ಕೆ ಕಂಬಳದ ಕೋಣಗಳ ಕುರಿತಾಗಿ ಇರುವ ಕಾಳಜಿ ಜಿಲ್ಲೆಯ ಜನ ಸಾಮಾನ್ಯರ ಕುರಿತು ಇಲ್ಲ. ಮೈಸೂರು ದಸರಾದಲ್ಲಿ ಕಂಬಳ ಸ್ಪರ್ಧೆ ಏರ್ಪಡಿಸುವ ಮೂಲಕ ಕರಾವಳಿಯ ಜನತೆಯನ್ನು ಮರಳು ಮಾಡಲು ನೋಡುತ್ತಿದ್ದಾರೆ. ಕಿದ್ವಾಯಿ, ಜಯದೇವ, ನಿಮ್ಹಾನ್ಸ್  ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸುವುದು, ಸರಕಾರಿ ಆಸ್ಪತ್ರೆಗಳ ಬಲವರ್ಧನೆಯಂತಹ ನಿಜವಾದ ಬೇಡಿಕೆಗಳನ್ನು ಕಂಬಳದ ಅಬ್ಬರದಲ್ಲಿ ಮರೆಗೆ ಸರಿಸಲಾಗುತ್ತಿದೆ. ಕರಾವಳಿಯ ಜನತೆಯ ಕುರಿತಾಗಿ ಮುಖ್ಯಮಂತ್ರಿಗಳಿಗೆ ನಿಜವಾಗಿಯೂ ಕಾಳಜಿ ಇದ್ದಲ್ಲಿ ಮೈಸೂರಿಗೆ, ಕಲ್ಬುರ್ಗಿ ಮಂಜೂರು ಆಗಿರುವ ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿಯೂ ಸ್ಥಾಪಿಸಲಿ, ಜಿಲ್ಲೆಯ ದುಡಿಯುವ ಜನರ ಬದುಕಿನ ಪ್ರಶ್ನೆಗಳು ಆರೋಗ್ಯ, ಶಿಕ್ಷಣ, ಉದ್ಯೋಗ ಹೊರತು ಕಂಬಳದ ವಿಜೃಂಭಣೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು, ಇಲ್ಲದಿದ್ದಲ್ಲಿ ಸರಕಾರಿ ಆಸ್ಪತ್ರೆಗಳ ಬಲವರ್ಧನೆ, ಜನಸಾಮಾನ್ಯರ ಆರೋಗ್ಯದ ಹಕ್ಕಿಗಾಗಿ ಹೋರಾಟ ಜಿಲ್ಲೆಯಲ್ಲಿ ತೀವ್ರಸ್ವರೂಪ ಪಡೆಯಲಿದೆ ಎಂದು ಅವರು ಎಚ್ಚರಿಸಿದರು.

ಹೋರಾಟ ಸಮಿತಿ ಸಂಚಾಲಕರಾದ ಸದಾಶಿವ ದಾಸ್ ಮಾತನಾಡಿ, ಕೈಗಾರಿಕಾ ವಲಯವಾಗಿ ಬೆಳೆಯುತ್ತಿರುವ ಗುರುಪುರ ಹೋಬಳಿಯಲ್ಲಿ ಸರಕಾರಿ ಆರೋಗ್ಯ ವ್ಯವಸ್ಥೆ ತೀರಾ ದುರ್ಬಲಗೊಂಡಿದೆ. ಹೋಬಳಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರು, ಸಿಬ್ಬಂದಿ, ಔಷಧಿ ಕೊರತೆಯಿಂದ ಬಳಲುತ್ತಿದೆ. ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವುದು ಶಾಸಕರು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಪ್ರಸಾವನೆಯ ಹಂತದಲ್ಲಿಯೆ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಮುದಾಯ ಆಸ್ಪತ್ರೆಯ ಬೇಡಿಕೆಯ ಕುರಿತಾದ ಹೋರಾಟವನ್ನು ಹೋಬಳಿಯ ಗ್ರಾಮಗಳಿಗೆ ವಿಸ್ತರಿಸುವುದಾಗಿ ಅವರು ಎಚ್ಚರಿಸಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ಹೊನ್ನಯ್ಯ ಅಮೀನ್ ವಾಮಂಜೂರು, ಬಾಬು ಸಾಲ್ಯಾನ್ ತಿರುವೈಲು, ಅಶೋಕ್ ವಾಮಂಜೂರು, ಆನಂದ ಪೂಜಾರಿ ಇರುವೈಲು, ಯಶೋಧಾ ಮಳಲಿ, ಸಾಮಾಜಿಕ ಕಾರ್ಯಕರ್ತರಾದ ಬಾವಾ ಪದರಂಗಿ, ಶೀನಾ ನಾಯ್ಕ್, ರವೀಂದ್ರ ಶೆಟ್ಟಿಗಾರ್ ಮುಚ್ಚೂರು, ಜನಾರ್ಧನ ಗೌಡ ಎಡಪದವು, ದಿನೇಶ್ ಇರುವೈಲು, ರಾಜೇಶ್ ನಾಯ್ಕ್, ಭೋಜ ಇರುವೈಲು, ಗೋಪಾಲ ಮೂಲ್ಯ, ವಾರಿಜ ಕುಪ್ಪೆಪದವು, ಕುಸುಮ ಕುಪ್ಪೆಪದವು ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article