ಜಿಲ್ಲೆಯಲ್ಲಿ ಮಳೆ: ಸಿಡಿಲು ಬಡಿದು ಹಾನಿ
ಅಜ್ಜಿಬೆಟ್ಟು ಗ್ರಾಮದ ಅನಿಲ್ದಡ್ಡ ಎಂಬಲ್ಲಿ ಕುಶಾಲಾಕ್ಷಿ-ನಾಗೇಶ್ ಮೂಲ್ಯ ಎಂಬವರ ಮನೆಗೆ ಸಿಡಿಲು ಬಡಿದು ತೀವ್ರ ಹಾನಿಯಾಗಿದ್ದು, ಪರಿಣಾಮ ಕುಶಾಲಾಕ್ಷಿ (35) ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಲಾಗಿದೆ. ಸಿಡಿಲಿನ ತೀವ್ರ ಹೊಡೆತಕ್ಕೆ ಮನೆಯ ಹಂಚು, ಗೋಡೆ ಹಾಗೂ ಕಿಟಕಿಗಳ ಗಾಜುಗಳು ಪುಡಿಪುಡಿಯಾಗಿದ್ದು, ಮನೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರು ತಿಳಿಸಿದ್ದಾರೆ.
ಅದೇರೀತಿ ತಾಲೂಕಿನ ಪಂಜಿಕಲ್ಲು ಸರಕಾರಿ ಪ್ರೌಢಶಾಲಾ ಕಟ್ಟಡ ಕೂಡ ಸಿಡಿಲಾಘಾತಕ್ಕೆ ಹಾನಿಯಾಗಿದೆ. ಶಾಲೆಗರ ರಜೆ ಇದ್ದುದರಿಂದ ಅನಾಹುತ ತಪ್ಪಿಹೋಗಿದೆ. ಶಾಲೆಯ ಸ್ವಿಚ್ ಬೋರ್ಡ್ ಸಹಿತ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಅಬ್ಬರದ ಗುಡುಗು:
ಜಿಲ್ಲೆಯಾದ್ಯಂತ ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಗಿನ ಜಾವ ಸಾಧಾರಣ ಮಳೆ ಹಾಗೂ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಸೋಮವಾರ ಬೆಳಗ್ಗಿನ ಜಾವ ಬಂಟ್ವಾಳದಾದ್ಯಂತ ಅಬ್ಬರದ ಗುಡುಗು,ಮಿಂಚು ಕಂಡುಬಂದಿದ್ದು,ಇದೇ ಸಿಡಿಲು ಮನೆ, ಹಾಗೂ ಶಾಲೆಗೆ ಬಡಿದಿದೆ. ಮಧ್ಯಾಹ್ನದ ವೇಳೆಗೆ ಮಳೆ ನಿಂತು ಪ್ರಖರವಾದ ಬಿಸಿಲು ಮೂಡಿದೆ.
ಬೆಳಗ್ಗೆ 8 ಗಂಟೆಯವರೆಗೂ ಮೋಡ ಕವಿದ ವಾತಾವರಣ ಹಾಗೂ ಮಳೆಯ ಛಾಯೆ ಇತ್ತು. ಸರ್ಕಾರಿ ಶಾಲೆಗಳಿಗೆ ರಜೆ ಇದ್ದರೂ ಕೆಲವು ಖಾಸಗಿ ಶಾಲೆಗಳು ತೆರೆದಿದ್ದರಿಂದ ಮಕ್ಕಳು ಶಾಲೆಗೆ ತೆರಳುವಾಗ ಸ್ವಲ್ಪ ತೊಂದರೆಯಾಯಿತು. ಏರುಹೊತ್ತಿಗೆ ಮಳೆ ಸಂಪೂರ್ಣವಾಗಿ ನಿಂತಿತು.
ಈ ಮಳೆಯಿಂದ ನದಿಗಳಲ್ಲಿ ನೀರಿನ ಒರತೆ ಹೆಚ್ಚಾಗುವುದಿಲ್ಲ. ಈಗಾಗಲೇ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚು ಮಳೆ ಸುರಿಯದಿದ್ದರೆ ನೀರಿನ ಕೊರತೆ ಉಂಟಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.