ಕಟೀಲು ದೇವಿಗೆ ನೂತನ ಬ್ರಹ್ಮರಥ, ಚಂದ್ರಮಂಡಲ ರಥಗಳಲ್ಲಿ ಉತ್ಸವ
ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥವನ್ನು ಕಟೀಲು ದೇವಿಗೆ ದಾನಿಯೊಬ್ಬರು ಸೇವಾ ರೂಪದಲ್ಲಿ ನಿರ್ಮಿಸಿ ಕೊಡುತ್ತಿದ್ದಾರೆ. ಉಡುಪಿಯ ಶಿಲ್ಪಿ ಸುದರ್ಶನ ಆಚಾರ್ಯರ ನೇತೃತ್ವದಲ್ಲಿ ಹನ್ನೆರಡು ಮಂದಿ ಶಿಲ್ಪಿಗಳು ಒಂದೂವರೆ ವರ್ಷಗಳ ಕಾಲ ರಥ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಐದು ಚಕ್ರಗಳ ಚಂದ್ರ ಮಂಡಲ ರಥವೂ ನಿರ್ಮಾಣವಾಗಲಿದೆ.
ಹೀಗಿರಲಿದೆ ರಥ:
ರಥದ ಜಿಡ್ಡೆಯ ಎತ್ತರ 12.5 ಅಡಿ, 12.5 ಅಡಿ ಅಗಲ ಇರಲಿದೆ. ಸಿಂಹ ಮುಖದ ಕೆತ್ತನೆ, ಆನೆ ಕೆತ್ತನೆ ಸಾಲು, ಹೊಯ್ಸಳ ಶೈಲಿಯ ಬಳ್ಳಿ ಕೆತ್ತನೆ, ಗೋವು ಕರುಗಳ ಕೆತ್ತನೆ ಹೀಗೆ ನಾಲ್ಕು ಹಂತದಲ್ಲಿ ವಿಗ್ರಹಗಳ ಸಾಲು ಬರುತ್ತದೆ. ಅಷ್ಟ ದಿಕ್ಪಾಲಕರು, ಹದಿನಾರು ಸಿಂಹಗಳ, ಹಂಸಗಳ, ಗಂಟೆಗಳ, ನಲವತ್ತೆಂಟು ಗಜಪಕ್ಷಿಗಳ ಕೆತ್ತನೆಗಳಿರುತ್ತವೆ.
ಎರಡನೆ ಹಂತದಲ್ಲಿ ಸಮುದ್ರಮಥನ, ಸೀತಾ ಕಲ್ಯಾಣ, ಪಾರ್ವತಿ ಸ್ವಯಂವರ, ಶ್ರೀ ರಾಮ ಪಟ್ಟಾಭಿಷೇಕ, ನವದುರ್ಗೆಯರ ಕೆತ್ತನೆಗಳಿರುತ್ತವೆ. ಕಾಳಿಕಾಂಬ, ಗಾಯತ್ರೀ, ಸಹಸ್ರಾಕ್ಷಿ, ಲಕ್ಷ್ಮೀ ನರಸಿಂಹ, ಅಷ್ಟ ಲಕ್ಷ್ಮಿಯರು, ಶಾಕಂಬರಿ, ಶತಾಕ್ಷಿ, ಲಲಿತಾಂಬಿಕೆ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತೀ, ಪಂಚ ಮಾತೃಕಿಯರು, ಬಾಲ ಸರಸ್ವತಿ, ಗೌರೀ ಲಕ್ಷ್ಮೀ ಕೆತ್ತನೆಗಳ ಜೊತೆಗೆ ಸರ್ಪಗಳ ಕೆತ್ತನೆ ರಥದ ಮೆರುಗನ್ನು ಹೆಚ್ಚಿಸಲಿವೆ.
ವ್ಯಾಲಮುಖ, ಕುದುರೆ, ಮೊಗ್ಗು ಆಕಾರ ಕೆತ್ತನೆಗಳ ಜೊತೆಗೆ ಐವತ್ತಾರು ಚಿಕ್ಕ ಕಂಬಗಳು ರಥದ ಸೌಂದರ್ಯಕ್ಕೆ ಪೂರಕವಾಗಿ ಇರಲಿವೆ.
ನಾಲ್ಕನೆಯ ಹಂತದಲ್ಲಿ ರಂಗಸ್ಥಳ ಯಕ್ಷಗಾನದ ಕೆತ್ತನೆ, ಮೇಲಿನ ಹಲಗೆಯಲ್ಲಿ ಗಂಡಬೇರುಂಡ ಇರುತ್ತದೆ. ಪೀಠ, ದ್ವಾರಗಳಲ್ಲಿ ಹದಿನಾರು ದೇವರ ಚಿತ್ರಪಟಗಳು, ಹದಿನಾರು ಹಾವಿನ ಹೆಡೆಗಳು ಇತರ ಅಲಂಕಾರಗಳು, ಪತಾಕೆ ನಿಶಾನೆಗಳು, ಶಿಖರ, ಶ್ವೇತಚಕ್ರ ಹೀಗೆ ಕಟೀಲು ದೇವರಿಗೆ ನಿರ್ಮಾಣವಾಗುತ್ತಿರುವ ನೂತನ ರಥ ಮನಮೋಹಕವಾಗಿ ಮೂಡಿಬರಲಿದೆ.
ಖ್ಯಾತ ವಿದ್ವಾಂಸ ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರು ವಾಸ್ತು ಹೇಳಿದ್ದು, ಧ್ವಜಾಯದಲ್ಲಿ ಸುದರ್ಶನ ಆಚಾರ್ಯರು ಕಟೀಲು ದೇಗುಲದ ಎದುರೇ ನಿರ್ಮಿಸಿರುವ ಆವರಣದಲ್ಲಿ ಇತರ ಶಿಲ್ಪಿಗಳೊಂದಿಗೆ ರಥದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಟೀಲಿನಲ್ಲಿ ಚಿನ್ನದ ರಥ ಆಗುವ ಸಂದರ್ಭ ಕಡಿಯಾಳಿ ಕೃಷ್ಣಮೂರ್ತಿ ಆಚಾರ್ಯರ ಜೊತೆಗೆ ಶಿಲ್ಪಿಯಾಗಿದ್ದ ಸುದರ್ಶನ ಆಚಾರ್ಯರು ಈಗ ಬ್ರಹ್ಮರಥ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.
ಸುದರ್ಶನ ಆಚಾರ್ಯರು ಬಹುಬೇಡಿಕೆಯ ಶಿಲ್ಪಿಯಾಗಿದ್ದಾರೆ. ಕಡಿಯಾಳಿ, ಪುತ್ತೂರು ದೇಗುಲ, ಕುಂಜಾರುಗಿರಿ, ಸೋದೆ ವಾದಿರಾಜ ಮಠ, ಶಿಮಂತೂರು ದೇವಸ್ಥಾನ ತುಮಕೂರು, ಬೆಂಗಳೂರು, ಅಡ್ವೆ, ಬ್ರಹ್ಮಾವರ ಸಾಲಿಕೇರಿ, ಕಾವೂರು ಹೀಗೆ ಅನೇಕ ಕಡೆಗಳಲ್ಲಿ ರಥಗಳನ್ನು ನಿರ್ಮಿಸಿದ ಅನುಭವಿಯಾಗಿದ್ದಾರೆ. 26 ವರ್ಷಗಳಿಂದ ಶಿಲ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕಟೀಲು ದೇಗುಲದಲ್ಲಿ ಬ್ರಹ್ಮರಥದ ಜೊತೆಗೆ ವಿಶಿಷ್ಟ ರೀತಿಯ ಐದು ಚಕ್ರಗಳ ಚಂದ್ರಮಂಡಲ ರಥವನ್ನೂ ನಿರ್ಮಿಸಲಿದ್ದಾರೆ. ಇವರೆಡೂ ಎಪ್ರಿಲ್ ತಿಂಗಳಲ್ಲಿ ದೇವರಿಗೆ ಸಮರ್ಪಣೆಯಾಗಲಿವೆ.
ಎಪ್ರಿಲ್‌ನಲ್ಲಿ ಎರಡು ರಥ ಸಿದ್ಧ
ಕಟೀಲು ದೇವರಿಗೆ ಭಕ್ತರು 6 ಚಕ್ರಗಳ ಬ್ರಹ್ಮರಥ ಹಾಗೂ ಐದು ಚಕ್ರಗಳ ಚಂದ್ರ ಮಂಡಲ ನಿರ್ಮಿಸಿಕೊಡುತ್ತಿದ್ದಾರೆ. ದೇವರು ನಡೆಸಿಕೊಟ್ಟರೆ ಎರಡೂ ರಥಗಳ ಸಮರ್ಪಣೆ ಎಪ್ರಿಲ್‌ನಲ್ಲಿ ನಡೆಯಲಿದ್ದು, ನೂತನ ರಥಗಳಲ್ಲೇ ಭ್ರಮರಾಂಬೆಯ ಜಾತ್ರೆ ನಡೆಯಲಿದೆ.
ರಥದ ಚಕ್ರಗಳು ತಿರುಗುವಾಗ ರಥದ ಮೇಲೆಯೂ ಐದು ಚಕ್ರಗಳು ತಿರುಗುವ ವಿಶಿಷ್ಟ ವಿನ್ಯಾಸದ ಚಂದ್ರ ಮಂಡಲ ಸಿದ್ಧವಾಗಲಿದೆ. ಈಗ ಇರುವ ಬ್ರಹ್ಮರಥ ಏಳೆಂಟು ದಶಕಗಳಿಗೂ ಹಿಂದಿನದು. ರಥ ಹಳೆಯದ್ದಾದರಿಂದ ಹೊಸ ರಥದ ನಿರ್ಮಾಣಕ್ಕೆ ನಿರ್ಧರಿಸಿದಾಗ ಭಕ್ತರೋರ್ವರು ಸೇವಾರೂಪದಲ್ಲಿ ನಿರ್ಮಿಸಿಕೊಡಲು ಮುಂದೆ ಬಂದರು. ಚಂದ್ರಮಂಡಲ ರಥ ನಿರ್ಮಾಣಕ್ಕೆ ನಿರ್ಧರಿಸಿದಾಗ ಮತ್ತೋರ್ವ ಭಕ್ತರು ತಮ್ಮ ವತಿಯಿಂದ ನಿರ್ಮಿಸಿಕೊಡಲು ಒಪ್ಪಿದರು. ದೇವರ ಇಚ್ಛೆಯಂತೆ ಕಟೀಲಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ನೂತನ ರಥಗಳು ದೇವರ ಸೇವೆಗೆ ಸಿದ್ದವಾಗಲಿವೆ ಎಂದು ಕಟೀಲು ದೇವಸ್ಥಾನದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು.