ಶ್ರೀ ಕ್ಷೇತ್ರ ಕಟೀಲು: ಮಹಿಳಾ ಭಕ್ತರಿಗೆ ಶೇಷವಸ್ತ್ರ ವಿತರಣೆ
ಬೆಳಗ್ಗಿನಿಂದಲೇ ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇಗುಲಕ್ಕೆ ಬರುತ್ತಿದ್ದು, ಸಂಜೆ 6 ಗಂಟೆಯಿಂದ ಅನ್ನಪ್ರಸಾದ ಸ್ವೀಕರಿಸುವ ಮಹಿಳಾ ಭಕ್ತರಿಗೆ ದೇವರ ಶೇಷವಸ್ತ್ರ ವಿಸ್ತರಿಸಲಾಯಿತು. ಇಪ್ಪತ್ತು ಸಾವಿರಕ್ಕೂ ಮಿಕ್ಕಿದ ಭಕ್ತರಿಗೆ ಶೇಷ ವಸ್ತ್ರ ವಿತರಿಸಲಾಯಿತು. ಮಧ್ಯಾಹ್ನ 2 ಗಂಟೆಯಿಂದಲೇ ಮಹಿಳಾ ಭಕ್ತರು ಸರತಿ ಸಾಲಿನಲ್ಲಿ ನಿಲ್ಲತೊಡಗಿದ್ದರು. ದೇಗುಲದ ಒಳಾಂಗಣದಲ್ಲಿ ಕಡಿಮೆ ಸ್ಥಳ ಇರುವ ಕಾರಣ ಒಳಗೆ ಹೋಗಲು ಹಾಗೂ ಹೊರಗೆ ಹೋಗಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಸರತಿ ಸಾಲಿನ ವ್ಯವಸ್ಥೆ ಚೆನ್ನಾಗಿ ಮಾಡಲಾಗಿತ್ತು. ಕಟೀಲು ಶಿಕ್ಷಣ ಸಂಸ್ಥೆಗಳ ನೂರಾರು ಮಂದಿ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ಬೆಳಿಗ್ಗಿನಿಂದಲೇ ಸರಸ್ವತಿ ಸದನದಲ್ಲಿ ಭಜನೆ, ನಾಟ್ಯ ಸಂಗೀತ, ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತಿದ್ದವು. ಬೆಂಗಳೂರಿನ ಭಕ್ತರೊಬ್ಬರು ದೇಗುಲದ ಆವರಣದಲ್ಲಿ ಆಕರ್ಷಕ ಹೂವಿನ ಅಲಂಕಾರದ ಸೇವೆ ಮಾಡಿದ್ದರು.
ಕೊಡೆತ್ತೂರು ಮೆರವಣಿಗೆ ಸಮಿತಿಯಿಂದ ವೈಭವದ ಹುಲಿ ಮುಂತಾದ ವೇಷಗಳು ಸ್ತಬ್ಧ ಚಿತ್ರಗಳ ವೈಭವದ ಮೆರವಣಿಗೆ ಕಟೀಲು ದೇಗುಲಕ್ಕೆ ಬಂದು ವೇಷಧಾರಿಗಳು ಹರಕೆ ತೀರಿಸಿದರು.