ಕರಾವಳಿಯ ಧಾರ್ಮಿಕ, ಸಾಂಸ್ಕೃತಿಕ ಹೆಮ್ಮೆ: ಅ.11 ರಿಂದ ‘ಮಂಗಳೂರು ದಸರಾ’: ಮುಖ್ಯಮಂತ್ರಿ ಚಾಲನೆ
ಕ್ಷೇತ್ರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಹೆಚ್. ಸೋಮಸುಂದರಂ, ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಅ.11ರಿಂದ 22ರವರೆಗೆ ಉತ್ಸವವು ಅತ್ಯಂತ ವೈಭವದಿಂದ ಜರುಗಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನಸಭೆಯ ಉಪಸಭಾಪತಿ ಮಂಕಾಳು ವೈದ್ಯ, ಸಂಸದರು, ಶಾಸಕರು ಸೇರಿದಂತೆ ರಾಜ್ಯ ಹಾಗೂ ನೆರೆಯ ಕೇರಳ ಸರ್ಕಾರದ ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಖಜಾಂಚಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಅ.11ರಂದು ಬೆಳಗ್ಗೆ 8.30ಕ್ಕೆ ಮಹಾನವಮಿ ಉತ್ಸವ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12 ಗಂಟೆಗೆ ವೈದಿಕ ವಿಧಿ-ವಿಧಾನಗಳೊಂದಿಗೆ ಶ್ರೀ ಶಾರದಾ ಮಾತೆ, ಮಹಾಗಣಪತಿ, ಆದಿಶಕ್ತಿ ಹಾಗೂ ನವದುರ್ಗೆಯರ ವಿಗ್ರಹಗಳ ಪ್ರತಿಷ್ಠಾಪನೆ ನೆರವೇರಲಿದೆ. ಅಕ್ಟೋಬರ್ 21ರಂದು ಸಂಜೆ 4 ಗಂಟೆಗೆ ವಿಶ್ವವಿಖ್ಯಾತ ಐತಿಹಾಸಿಕ ಮಂಗಳೂರು ದಸರಾ ಶೋಭಾಯಾತ್ರೆ ಆರಂಭವಾಗಲಿದೆ. ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಯ ನಯನಮನೋಹರ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿರುವ ದರ್ಬಾರ್ ಮಂಟಪವನ್ನು ಈ ಬಾರಿ ನೂತನ ‘ಅರಮನೆ ಶೈಲಿ’ಯಲ್ಲಿ ಕಣ್ಮನ ಸೆಳೆಯುವಂತೆ ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುತ್ತಿದೆ ಎಂದರು.
ಪ್ರತಿದಿನ ಚಂಡಿಕಾಹೋಮ: ಅ.12ರಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 8.30ಕ್ಕೆ ಶ್ರೀಕ್ಷೇತ್ರದಲ್ಲಿ ಚಂಡಿಕಾಹೋಮ ನಡೆಯಲಿದ್ದು, ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಅವಕಾಶವಿದೆ. ಅ.17ರಂದು ಸಾಮೂಹಿಕ ವಿಶೇಷ ಚಂಡಿಕಾಹೋಮ ಜರುಗಲಿದ್ದು, ಬೆಳಗ್ಗೆ 11.30ಕ್ಕೆ ಮಹಾಪೂರ್ಣಾಹುತಿ ನೆರವೇರಲಿದೆ. ಸಂತೋಷಿ ಕಲಾಮಂಟಪದಲ್ಲಿ ಅ.11ರಿಂದ 20ರವರೆಗೆ ನಿತ್ಯ ಮಧ್ಯಾಹ್ನ 2.30ರಿಂದ ರಾತ್ರಿ 11.30ರವರೆಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
‘ಅಸಾಮಾನ್ಯ ಸ್ತ್ರೀ’ ಸನ್ಮಾನ:
ಸಮಾಜದ ವಿವಿಧ ರಂಗಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ 9 ಮಂದಿ ಸಾಧಕ ಮಹಿಳೆಯರಿಗೆ ಪ್ರತಿದಿನ ಒಬ್ಬರಂತೆ ‘ಅಸಾಮಾನ್ಯ ಸ್ತ್ರೀ’ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಗೆ ನೂರಕ್ಕೂ ಹೆಚ್ಚು ನಾಮನಿರ್ದೇಶನಗಳು ಬಂದಿದ್ದು, ಪರಿಶೀಲಿಸಿ 9 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದರು.
ಪ್ರಮುಖ ಆಕರ್ಷಣೆಗಳು ಮತ್ತು ಸ್ಪರ್ಧೆಗಳು..
* ಅ.12: ರಾಜ್ಯಮಟ್ಟದ ದಸರಾ ಕವಿಗೋಷ್ಠಿ, ಕಥೆ ಹಾಗೂ ಕವನ ಸ್ಪರ್ಧೆ.
* ಅ.13: ಸಂಜೆ 7.30ಕ್ಕೆ ‘ರುದ್ರತಾಂಡವಮ್’ ರಾಜ್ಯಮಟ್ಟದ ಭಕ್ತಿಪ್ರಧಾನ ಸಮೂಹ ನೃತ್ಯ ಸ್ಪರ್ಧೆ (ಸೀಸನ್-2).
* ಅ.15: ಬೆಳಗ್ಗೆ 9 ಗಂಟೆಗೆ ‘ಮಕ್ಕಳ ದಸರಾ’ ಉದ್ಘಾಟನೆ; ಭಕ್ತಿಗೀತೆ, ಚಿತ್ರಕಲೆ, ದೇಶಭಕ್ತಿಗೀತೆ ಸ್ಪರ್ಧೆಗಳು.
* ಅ.16: ‘ಮುದ್ದು ಶಾರದೆ’ ಸ್ಪರ್ಧೆ.
* ಅ.18: ದಸರಾ ಮ್ಯಾರಥಾನ್ (ಎಡಿಷನ್-4) ಹಾಗೂ ‘ಕಿನ್ನಿಪಿಲಿ’ (ಸೀಸನ್-2) ಹುಲಿವೇಷ ಸ್ಪರ್ಧೆ.
* ಅ.19: ಪ್ರಪ್ರಥಮ ಬಾರಿಗೆ ‘ಮಹಿಳಾ ದಸರಾ’ ಆಯೋಜನೆ; ಭರತನಾಟ್ಯ, ಬೆಂಕಿ ರಹಿತ ಅಡುಗೆ, ರಂಗೋಲಿ, ಮೆಹಂದಿ, ಹೂ ಕಟ್ಟುವ ಸ್ಪರ್ಧೆ ಹಾಗೂ ರಾತ್ರಿ 8 ಗಂಟೆಗೆ ಮಹಿಳೆಯರಿಂದ ಸಮೂಹ ಗರ್ಭಾ-ದಾಂಡಿಯಾ ನೃತ್ಯ.
* ಅ.20: ಬೆಳಗ್ಗೆ 9 ಗಂಟೆಗೆ ಶಾರದಾ ಮಾತೆಯ ಸನ್ನಿಧಿಯಲ್ಲಿ ಮಕ್ಕಳಿಗೆ ಸಾಮೂಹಿಕ ‘ಅಕ್ಷರಾಭ್ಯಾಸ’ ಹಾಗೂ ‘ದಸರಾ ರಂಗಾಂತರಂಗ’ ಸಾಂಸ್ಕೃತಿಕ ವೈವಿಧ್ಯಮಯ ಸ್ಪರ್ಧೆಗಳು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿ ಟ್ರಸ್ಟಿ ಕಿಶೋರ್ ದಂಡಕೇರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಡಾ. ಬಿ. ಜಿ. ಸುವರ್ಣ, ಚಿತ್ತರಂಜನ್ ಗರೋಡಿ, ಜತಿನ್ ಅತ್ತಾವರ, ಲೀಲಾಕ್ಷ ಕರ್ಕೇರ, ರಾಧಕೃಷ್ಣ, ಚಂದನ್ ದಾಸ್, ಬಿ. ವಾಸುದೇವ ಕೋಟ್ಯಾನ್, ಲತೀಶ್ ಎಂ. ಸುವರ್ಣ, ಸತೀಶ್ ಸುವರ್ಣ ಉಪಸ್ಥಿತರಿದ್ದರು.