HPCL ಗುತ್ತಿಗೆ ಕಾರ್ಮಿಕರ ಮನವಿ ಸ್ವೀಕರಿಸಲು ನಿರಾಕರಿಸಿದ ಅಧಿಕಾರಿಗಳು, ಗುತ್ತಿಗೆದಾರರು: CITU ತೀವ್ರ ಆಕ್ರೋಶ
Wednesday, October 7, 2026
ಮಂಗಳೂರು: ಕೇಂದ್ರ ಸರಕಾರದಡಿಯಲ್ಲಿರುವ HPCLನಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಗುತ್ತಿಗೆದಾರರ ಮೂಲಕ ನಿರಂತರವಾಗಿ ಸ್ವೀಪರ್ ಹಾಗೂ ಗಾರ್ಡನಿಂಗ್ ಕೆಲಸದಲ್ಲಿ ತೊಡಗಿರುವ ಉತ್ತರ ಕರ್ನಾಟಕದ ಮೂಲದ 4 ಮಂದಿ ಮಹಿಳಾ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ವಜಾಗೊಳಿಸಿದ HPCL ಸಂಸ್ಥೆಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಮರುನೇಮಕಗೊಳಿಸುವಂತೆ ಒತ್ತಾಯಿಸಿ ಇಂದು ಮನವಿಯನ್ನು ಅರ್ಪಿಸಲು ಹೊರಟಾಗ ಕನಿಷ್ಠ ಮನವಿಯನ್ನು ಸ್ವೀಕರಿಸಲು ನಿರಾಕರಿಸಿದ HPCL ಅಧಿಕಾರಿಗಳ ವಿರುದ್ಧ CITU ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿತು.
ಮೂರು ಗಂಟೆಗಳ ನಂತರ ಆಗಮಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಮನವಿಯನ್ನು ಅರ್ಪಿಸಲಾಯಿತು.
4 ಜನ ಮಹಿಳಾ ಕಾರ್ಮಿಕರಿಗೆ ದಿನಾಂಕ 01.09.2026ರಿಂದ ಯಾವುದೆ ಕಾರಣ ಹೇಳದೆ, ಲಿಖಿತ ಮುನ್ಸೂಚನೆ ನೀಡದೆ ಕೆಲಸಕ್ಕೆ ಹಾಜರಾಗಲು ಅವಕಾಶ ನೀಡುತ್ತಿಲ್ಲ. ಈ ಕಾರ್ಮಿಕರು ಪ್ರತಿ ದಿನ ಕಂಪನಿಯ ಬಳಿಬಂದು ಕೆಲಸಕ್ಕೆ ಹಾಜರಾಗಲು ಅವಕಾಶ ಕೋರಿದರೂ ಗುತ್ತಿಗೆದಾರರು ಹಾಗು ಮೂಲ ಮಾಲಕರಾದ HPCL ಅವಕಾಶ ನೀಡಿರುವುದಿಲ್ಲ. ಆಡಳಿತ ವರ್ಗದ ಈ ಕ್ರಮವು ಕಾನೂನುಬಾಹಿರ ಹಾಗೂ ಕಾರ್ಮಿಕ ಕಾನೂನುಗಳ ಅಪ್ಪಟ ಉಲ್ಲಂಘನೆಯಾಗಿದೆ. ಈ ಮಹಿಳೆಯರ ಆದಾಯವನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದ ನಾಲ್ಕು ಕುಟುಂಬಗಳು ಬೀದಿಪಾಲಾಗಿದೆ ಎಂದು CITU ತಿಳಿದಿದೆ.
ಕೆಲಸ ನಿರಾಕರಣೆಗೆ ಒಳಗಾದ 4 ಗುತ್ತಿಗೆ ಕಾರ್ಮಿಕರನ್ನು ಪೂರ್ಣ ಹಿಂದಿನ ವೇತನ ಹಾಗೂ ಸೇವಾ ಮುಂದುವರಿಕೆಯೊಂದಿಗೆ ಮರುನೇಮಕ ಮಾಡಬೇಕು, ಎಲ್ಲಾ ಗುತ್ತಿಗೆ ಮತ್ತು ಖಾಯಮೇತರ ಕಾರ್ಮಿಕರಿಗೂ ಎಲ್ಲಾ ಕಾನೂನು ಸೌಲಭ್ಯಗಳನ್ನು ಒದಗಿಸ ಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಪತ್ರ ಸ್ವೀಕರಿಸಿದ 7 ದಿನಗಳ ಒಳಗೆ ಸಮಸ್ಯೆ ಇತ್ಯರ್ಥವಾಗದೆ ಇದ್ದಲ್ಲಿ ಕಾನೂನುಕ್ರಮಕ್ಕಾಗಿ ಮುಂದುವರೆಯುವುದು ಹಾಗೂ ಕಂಪನಿಯ ಎದುರು ಸಂವಿಧಾನದನ್ವಯ ಪ್ರಜಾಸತಾತ್ಮಕ ರೀತಿಯಲ್ಲಿ ತೀವ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು CITU ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ CPIM ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, CITU ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಬಶೀರ್ ಕಾನ, DYFI ಮುಖಂಡರಾದ ರಿಜ್ವಾನ್ ಹರೇಕಳ, ಶ್ರೀನಾಥ್ ಕಾಟಿಪಳ್ಳ, ಅಜ್ಮಲ್ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.

