ಪಿಲಿಕುಳ ನಿಸರ್ಗಧಾಮದ ಜಾಗ ಮುಸ್ಲಿಮರ ಸ್ಮಶಾನಕ್ಕೆ: ಅ.12 ರಂದು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಪಿಲಿಕುಳ ನಿಸರ್ಗಧಾಮದ ಜಾಗ ಮುಸ್ಲಿಮರ ಸ್ಮಶಾನಕ್ಕೆ: ಅ.12 ರಂದು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಮಂಗಳೂರು: ಪಿಲಿಕುಳ ನಿಸರ್ಗಧಾಮಕ್ಕೆ ಒಳಪಟ್ಟ ಭೂಮಿಯನ್ನು ಮುಸ್ಲಿಮರ ದಫನ ಕಾರ್ಯಕ್ಕೆಂದು ಜಿಲ್ಲಾಡಳಿತ ಮಂಜೂರು ಮಾಡಿರುವುದು ಹಿಂದು ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದ್ದು ಅ.12ರಂದು ಮೂಡುಶೆಡ್ಡೆ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆಗೆ ಸಜ್ಜಾಗಿವೆ. ದೈವಸ್ಥಾನ, ಜೈನ ಬಸದಿ ಬಳಿಯಲ್ಲೇ ಮುಸ್ಲಿಮರ ದಫನ ಕಾರ್ಯಕ್ಕೆ ಭೂಮಿ ನೀಡಿರುವುದು ಹಿಂದುಗಳ ಭಾವನೆಗೆ ಧಕ್ಕೆಯಾಗಿಸಿದೆ ಎಂದು ಆರೋಪ ಕೇಳಿಬಂದಿದೆ. 

ಮಂಗಳೂರು ಹೊರವಲಯದ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಒಳಪಟ್ಟ ಬೊಟ್ಟ ಎಂಬಲ್ಲಿ ಮುಸ್ಲಿಂ ದಫನ ಕಾರ್ಯಕ್ಕೆ ಎರಡು ಎಕರೆಯಷ್ಟು ಭೂಮಿ ನೀಡಲಾಗಿದೆ. ಕಳೆದ 28 ವರ್ಷಗಳಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದ್ದ ಭೂಮಿಯನ್ನು ಎದ್ರುಪದವಿನ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಹೆಸರಲ್ಲಿ ಹಸ್ತಾಂತರಿಸಲಾಗಿದೆ. ಮೂಡುಶೆಡ್ಡೆ ಗ್ರಾಮ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳದೆ ಈ ಆದೇಶ ಮಾಡಿರುವುದು ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗಿದೆ. 

ಕಳೆದ ಜೂನ್ 20ರಂದು ಮಸೀದಿಗೆ ಜಾಗ ಹಸ್ತಾಂತರಿಸುವಂತೆ ಮಂಗಳೂರು ತಹಶೀಲ್ದಾರ್ ಆದೇಶ ಮಾಡಿದ್ದಾರೆ. ಆದರೆ ಈ  ಜಾಗ ಬೊಟ್ಟ ಮನೆತನದ ಧರ್ಮ ದೈವಗಳ ಸ್ಥಾನದ ಸಮೀಪವಿದ್ದು ಇಲ್ಲಿ ಶವಗಳ ದಫನ ನಡೆದರೆ ದೈವಗಳ ಆರಾಧನೆಗೆ ಭಂಗವಾಗುತ್ತದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಹಸೀಲ್ದಾರ್ ಈ ಆದೇಶ ವಾಪಸ್ ಪಡೆದು ಕಬರಸ್ಥಾನಕ್ಕೆ ಬೇರೆ ಕಡೆ ಜಾಗ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಅಗ್ರಹಿಸಿದ್ದಾರೆ. 

30 ವರ್ಷಗಳ ಹಿಂದೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಸಂದರ್ಭದಲ್ಲಿ ಸ್ಥಳೀಯ ಕೃಷಿಕರು ತಮ್ಮ ಕುಮ್ಕಿ ಭೂಮಿಯನ್ನು ಬಿಟ್ಟುಕೊಟ್ಟಿದ್ದರು. ಇದೀಗ ಏಕಾಏಕಿ ಪಿಲಿಕುಳದ ಅದೇ ಭೂಮಿಯನ್ನು ಸ್ಥಳೀಯವಾಗಿ ಮಸೀದಿ, ಮುಸ್ಲಿಮರ ಮನೆಗಳು ಇಲ್ಲದಿದ್ದರೂ, ಮುಸ್ಲಿಮರಿಗೆ ಹಸ್ತಾಂತರ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸ್ಥಳದಲ್ಲಿದ್ದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ನಾಮಫಲಕ ತೆರವು ಮಾಡಿದ್ದು ಅದರ ಬದಲಿಗೆ ಮದರಸಕ್ಕೆ ಸೇರಿದ ಜಾಗ ಎಂದು ಬೋರ್ಡ್ ಹಾಕಲಾಗಿದೆ. ಕಬರಸ್ಥಾನಕ್ಕೆ ಬೇರೆ ಜಾಗ ನೀಡುವಂತೆ ಮೂಡುಶೆಡ್ಡೆ ಗ್ರಾಮಸ್ಥರು ಅ.12ರಂದು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಹಿಂದೂ ಸಂರಕ್ಷಣಾ ಸಮಿತಿಯ ಹೆಸರಲ್ಲಿ ಮೂಡುಶೆಡ್ಡೆ ಚಲೋಗೆ ಕರೆ ನೀಡಲಾಗಿದೆ.

ಮಸೀದಿಗೇ ಸೇರಿತ್ತು ಜಾಗ..! 

ಹಿಂದು ಸಂಘಟನೆಗಳ ಆಕ್ಷೇಪಕ್ಕೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಮಾಜಿ ಅಧ್ಯಕ್ಷ ಸೈಫುದ್ದೀನ್ ವಿರೋಧ ವ್ಯಕ್ತಪಡಿಸಿದ್ದು ಕಬರಸ್ಥಾನ ಉದ್ದೇಶಕ್ಕೆ ಜಿಲ್ಲಾಡಳಿತ ನೀಡಿರುವ ಜಮೀನು ಮಸೀದಿಗೆ ಸೇರಿದ್ದಾಗಿದ್ದು 1992 ರಲ್ಲೇ ಆ ಜಮೀನನ್ನು ಕಬರಸ್ಥಾನಕ್ಕೆ ನೀಡಲಾಗಿತ್ತು. 1993ರಲ್ಲಿ ಜಮೀನಿಗೆ ಆರ್ ಟಿ ಸಿ ಮಾಡಿದ್ದು 1994 ರಲ್ಲಿ ವಕ್ಫ್ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ. ಅದೇ ಜಮೀನಿನಲ್ಲಿ ಹಿಂದೆಯೂ ಐದಾರು ದಫನ್ ಕಾರ್ಯಗಳನ್ನು ನಡೆಸಲಾಗಿದೆ. ನಂತರ ಆ ಜಮೀನನ್ನು ಪಿಲಿಕುಳಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ವಿಚಾರವನ್ನು ಹಿಂದೆ ಬಂದು ಹೋದ ಹಲವು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಈಗ ಅದೇ ಹಿಂದಿನ ಜಮೀನನ್ನು ಮತ್ತೆ ಕಬರಸ್ಥಾನಕ್ಕೆ ಜಿಲ್ಲಾಡಳಿತ ನೀಡಿದೆ. ಇಲ್ಲಿ ದೇವಸ್ಥಾನ ಮತ್ತು ಮಸೀದಿಗೆ 500 ಮೀಟರ್ ಹೆಚ್ಚಿನ ಅಂತರ ಇದೆ. ಇಲ್ಲಿ ಯಾವುದೇ ರೀತಿಯಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆಯಾಗುತ್ತಿಲ್ಲ. ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article