ಲಕ್ಷಾಂತರ ಮೌಲ್ಯದ ಕಬ್ಬಿಣದ ಪೈಪ್ ಕಳವು: ಇಬ್ಬರ ಬಂಧನ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಚಟ್ಟಂಚಾಲ್‌ನಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ ಪ್ರದೇಶದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣದ ಪೈಪ್‌ಗಳನ್ನು ಕಳವು ಮಾಡಿದ ಆರೋಪದ ಮೇಲೆ ಇಬ್ಬರನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಿಲಿಕೋಡ್ ಏಚ್ಚಿಕ್ಕೊವ್ವಲ್ ನಿವಾಸಿ ಪ್ರಜ್ವಲ್ (33) ಮತ್ತು ಪಡನ್ನ ತೆಕ್ಕೇಕಾಡ್ ನಿವಾಸಿ ಶ್ರೀಜೇಶ್ (29) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಳವು ಮಾಡಲಾಗಿದೆ ಎನ್ನಲಾದ ಕಬ್ಬಿಣದ ಪೈಪ್‌ಗಳು ಹಾಗೂ ಅವುಗಳನ್ನು ಸಾಗಿಸಲು ಬಳಸಿದ್ದ ಮಿನಿ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಟ್ಟಂಚಾಲ್ನಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಮೇಘಾ ಕನ್ಸ್ಟ್ರಕ್ಷನ್ ಕಂಪನಿಗೆ ಸೇರಿದ 30ಕ್ಕೂ ಹೆಚ್ಚು ಬೃಹತ್ ಕಬ್ಬಿಣದ ಪೈಪ್ಗಳನ್ನು ಆರೋಪಿಗಳು ತಡರಾತ್ರಿ ಮಿನಿ ಲಾರಿಗೆ ತುಂಬಿಸಿಕೊಂಡು ಸಾಗಿಸುತ್ತಿದ್ದರು.
ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಮೇಲ್ಪರಂಬ ಪೊಲೀಸ್ ಉಪನಿರೀಕ್ಷಕರ ನೇತೃತ್ವದ ತಂಡಕ್ಕೆ ಮಿನಿ ಲಾರಿಯ ಚಲನವಲನದ ಬಗ್ಗೆ ಅನುಮಾನ ಮೂಡಿದೆ. ತಕ್ಷಣ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ, ಪೈಪ್ಗಳನ್ನು ಸಾಗಿಸಲು ಅಗತ್ಯವಾದ ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ.
ಬಳಿಕ ಪೊಲೀಸರು ಲಾರಿಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು, ಪೈಪ್‌ಗಳು ಹಾಗೂ ಮಿನಿ ಲಾರಿಯನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳವು ಪ್ರಕರಣದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬುದೂ ಸೇರಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.