ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
Saturday, October 10, 2026
ಮಂಗಳೂರು: ಕಳೆದ 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್ಪಿಸಿ ಪ್ರಕರಣದ ಆರೋಪಿಯನ್ನು ಮಂಗಳೂರು ಮಹಿಳಾ ಪೊಲೀಸರು ಪುತ್ತೂರಿನ ಇನ್ಲ್ಯಾಂಡ್ ಅಪಾರ್ಟ್ಮೆಂಟ್ನಲ್ಲಿ ಅ. 9ರಂದು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಮಂಗಳೂರಿನ ಹಸನ್ ಶಬೀರ್ (41) ಎಂದು ಗುರುತಿಸಲಾಗಿದೆ. 2013ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿಯ ವಿರುದ್ಧ ಸುಮಾರು 37 ಬಾರಿ ವಾರಂಟ್ ಜಾರಿಗೊಳಿಸಿತ್ತು. ಆದರೆ ಆರೋಪಿಯು ವಿಳಾಸ ಬದಲಾಯಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅ. 17ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಹಿಳಾ ಠಾಣೆಯ ಡಬ್ಲ್ಯುಪಿಎಸ್‌ಐ ಜ್ಯೋತಿ, ಪಿಎಸ್‌ಐ ಸುರೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.