ಅ.18ರ ಬಳಿಕ ಕರಾವ‍ಳಿ, ಮಲೆನಾಡು ಜಿಲ್ಲೆಗಳ ಸಹಿ ಅಭಿಯಾನ: ಐವನ್‌ ಡಿಸೋಜಾ

ಅ.18ರ ಬಳಿಕ ಕರಾವ‍ಳಿ, ಮಲೆನಾಡು ಜಿಲ್ಲೆಗಳ ಸಹಿ ಅಭಿಯಾನ: ಐವನ್‌ ಡಿಸೋಜಾ


ಮಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರು ನೇಮಿಸಿದ ಹೈಕೋರ್ಟ್‌ ಸಮಿತಿ ಅಕ್ಟೋಬರ್‌ 18ರ ಬಳಿಕ ಕರಾವ‍ಳಿ, ಮಲೆನಾಡು ಜಿಲ್ಲೆಗಳಿಗೆ ಆಗಮಿಸಿ ಅಭಿಪ್ರಾಯ ಸಂಗ್ರಹಿಸಲಿದೆ. ಈ ನಡುವೆ ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಜನಾಭಿಪ್ರಾಯ ಮೂಡಿಸುವ ಸಲುವಾಗಿ ಅಕ್ಟೋಬರ್‌ 15 ರೊಳಗೆ ಕರಾವಳಿ, ಮಲೆನಾಡು ಜಿಲ್ಲೆಗಳ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳು ಅಭಿಪ್ರಾಯ ಸಂಗ್ರಹ ಸಭೆ ನಡೆಸಲಿದ್ದಾರೆ.

ಕರ್ನಾಟಕ ಕರಾವಳಿ ಹೈಕೋರ್ಟ್‌ ಸಂಚಾರಿ ಪೀಠ ಹೋರಾಟ ಸಮಿತಿ ಸಂಚಾಲಕ, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಶನಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹೈಕೋರ್ಟ್‌ ಕಮಿಟಿ ಕರಾವಳಿಗೆ ಆಗಮಿಸಿ ಅಭಿಪ್ರಾಯ ಸಂಗ್ರಹಿಸಿ ಮುಖ್ಯ ನ್ಯಾಯಮೂರ್ತಿಗಳಿಗೆ ವರದಿ ಸಲ್ಲಿಸಲಿದೆ. ಅದಕ್ಕೂ ಮುನ್ನ ಅ. 12ರಂದು ಬೆಳಗ್ಗೆ 11.30 ಗಂಟೆಗೆ ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ನೇತೃತ್ವದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆಯಲಿದೆ. ಇದೇ ರೀತಿಯ ಸಭೆಗಳು ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲೂ ನಡೆಯಲಿದೆ. ರಾಜ್ಯ ಸರ್ಕಾರ ಕೂಡ ಹೈಕೋರ್ಟ್‌ ಸಂಚಾರಿ ಪೀಠ ಕರಾವಳಿಯಲ್ಲಿ ಸ್ಥಾಪಿಸುವ ಬಗ್ಗೆ ಬೆಂಬಲ ನೀಡಲಿದೆ ಎಂದರು.

ಎಲ್ಲ ವಕೀಲರ ಸಂಘಗಳಲ್ಲೂ ಸಭೆ:

ಕರಾವಳಿಯಲ್ಲಿ ಹೈಕೋರ್ಟ್‌ ಸಂಚಾರಪಿ ಪೀಠ ಸ್ಥಾಪನೆ ಕುರಿತಂತೆ ಸಾಧ್ಯವಾದಷ್ಟು ಪಕ್ಷಾತೀತವಾಗಿ ಒಮ್ಮತಾಭಿಪ್ರಾಯ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಂಸದರು, ಶಾಸಕರು ಕೂಡ ಪ್ರತ್ಯೇಕವಾಗಿ ಸಭೆ ನಡೆಸಿ ಒಮ್ಮತಾಭಿಪ್ರಾಯ ಕ್ರೂಢೀಕರಣ ಮಾಡುತ್ತಿದ್ದಾರೆ. ಎಲ್ಲ ತಾಲೂಕುಗಳಲ್ಲಿರುವ ವಕೀಲರ ಸಂಘಗಳಲ್ಲೂ ಸಭೆ ನಡೆಸಿ ಹೈಕೋರ್ಟ್‌ ಸಂಚಾರಿ ಪೀಠದ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಲಾಗುವುದು ಎಂದರು.

ಕರಾವಳಿಯಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳೂ ಒಲವು ವ್ಯಕ್ತಪಡಿಸಿದ್ದು, ಶೇ.50ರಷ್ಟು ಬೆಳವಣಿಗೆ ನಡೆದಿದೆ. ಇದೇ ವೇಳೆ ಅಲ್ಲೊಂದು ಇಲ್ಲೊಂದು ವಿರೋಧಗಳೂ ಕೇಳಿಬರುತ್ತಿವೆ. ಅದನ್ನು ಮೀರಿ ಕರಾವಳಿಯಲ್ಲಿ ಸಂಚಾರಿ ಪೀಠ ಸ್ಥಾಪಿಸಬೇಕಾಗಿದೆ. ಮುಖ್ಯವಾಗಿ ಕರಾವಳಿಯ ಮಂಗಳೂರಿನಲ್ಲಿ ಹೈಕೋರ್ಟ್‌ ಸಂಚಾರಿ ಪೀಠಕ್ಕೆ ಬೇಕಾದ ಎಲ್ಲ ರೀತಿಯ ಮೂಲಸೌಕರ್ಯಗಳು ಸಿದ್ಧವಾಗಿಯೇ ಇದ್ದು, ಇದನ್ನು ಕೂಡ ಹೈಕೋರ್ಟ್‌ ಕಮಿಟಿಗೆ ಮನವರಿಕೆ ಮಾಡಲಾಗುವುದು ಎಂದರು.

ಮಂಗಳೂರಿನಲ್ಲಿ ಕ್ಯಾಬಿನೆಟ್‌ ಸಭೆ ನಡೆಸಿ, ಕರಾವಳಿಗೆ ಭರಪೂರ ಕೊಡುಗೆಗಳನ್ನು ಕೂಡ ಸರ್ಕಾರ ನೀಡಿದ್ದು, ಕರಾವಳಿಯಲ್ಲಿ ಹೂಡಿಕೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದರು.

ಹೋರಾಟ ಸಮಿತಿ ವಕ್ತಾರ ಎಂ.ಪಿ.ನರೋನ್ಹಾ, ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್‌.ವಿ.ರಾಘವೇಂದ್ರ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೊನಾಲ್ಡ್‌ ಪ್ರವೀಣ್‌, ಸದಸ್ಯ ಆದಿತ್ಯ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article