ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ: 18 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ವಶಕ್ಕೆ
ಬಂಧಿತರನ್ನು ದೆಹಲಿಯ ಗೋಕುಲ್ ಪುರಿಯ ನಿವಾಸಿ ಅರ್ಮಾನ್ ಖಾನ್ ಯಾನೆ ಅಮನ್ ಸೋನಿ (34), ದೆಹಲಿಯ ಸುಲ್ತಾನ್ ಪುರಿಯ ನಿವಾಸಿ ಸಂಜೀವ್ ಕುಮಾರ್ ಯಾನೆ ಜಾನಿ (34) ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ:
ಮಂಗಳೂರು ನಗರದ ಅಳಕೆ ಕಂಬ್ಲ ಕ್ರಾಸ್ ರಸ್ತೆಯಲ್ಲಿರುವ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್‌ನಲ್ಲಿನ ಮನೆಯೊಂದರಲ್ಲಿ ಸೆ.28 ರಂದು ಮಧ್ಯಾಹ್ನ ಸುಮಾರು ೩ ಗಂಟೆಗೆ ಮನೆಯ ಬಾಗಿಲಿಗೆ ಲಾಕ್ ಹಾಕಿಕೊಂಡು ಮಾರುಕಟ್ಟೆಗೆ ತೆರಳಿದ್ದು, ಸಂಜೆ ಸುಮಾರು 5.10 ಗಂಟೆಗೆ ಮನೆಗೆ ಹಿಂದಿರುಗಿ ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಕೊಂಡಿಯನ್ನು ಮುರಿದು ಒಳನುಗ್ಗಿದ ಕಳ್ಳರು ಸುಮಾರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, ನಗದು ಹಣ, ವಾಚ್ ಹಾಗೂ ಒಂದು ಟ್ರಾಲಿ ಬ್ಯಾಗ್ ಸೇರಿದಂತೆ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೆ.27 ರಂದು ಹಗಲು ವೇಳೆಯಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಕ್ಕಪಾಟ್ನ ರಸ್ತೆಯ ಮನೆಯೊಂದರಲ್ಲಿ ಲಾಕರ್ ಹೊಡೆದು ಕಳವು ಮಾಡಲು ಯಾವುದೇ ಬೆಲೆಬಾಳುವ ಸೊತ್ತು ದೊರೆಯದೇ, ಚೆಕ್ ಪುಸ್ತಕಗಳನ್ನು ಕಳವು ಮಾಡಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾದ 24 ಗಂಟೆಗಳ ಒಳಗಾಗಿ ಸೆ.29 ರಂದು ವಡೋದರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಕಳವು ಮಾಡಲಾಗಿದ್ದ ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಸುಮಾರು 18 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಮುಂದಿನ ತನಿಖೆಯ ಸಲುವಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆ.
ಬಂಧಿತ ಆರೋಪಿಗಳ ಪೈಕಿ ಅರ್ಮಾನ್ ಖಾನ್ ಎಂಬಾತನ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದು ಮತ್ತು ಇತನ ವಿರುದ್ಧ ವಾರಂಟು ಹಾಗೂ ಪ್ರೊಕ್ಲಮೇಶನ್ ಬಾಕಿ ಇದ್ದು, ಸಂಬಂಧಪಟ್ಟ ಠಾಣೆಗಳಿಗೆ ಮುಂದಿನ ಕ್ರಮಕ್ಕಾಗಿ ಮಾಹಿತಿಯನ್ನು ನೀಡಲಾಗಿದೆ.