ಮನೆಯ ಮೇಲೆ ಉರುಳಿದ ಬೋರ್‌ವೆಲ್ ಲಾರಿ: ಇಬ್ಬರು ಕಾರ್ಮಿಕರು ಸಾವು
ಕಾಸರಗೋಡು: ಬೋರ್‌ವೆಲ್ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಮೇಲೆ ಉರುಳಿದ ಪರಿಣಾಮ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ವೆಸ್ಟ್ ಎಳೇರಿ ಗ್ರಾಮದ ವರಕ್ಕಾಡ್ ಜಂಕ್ಷನ್ ಸಮೀಪ ಇಂದು ನಡೆದಿದೆ ಮೃತಪಟ್ಟವರನ್ನು ಮಧ್ಯಪ್ರದೇಶದ ದೇವೇಂದ್ರನ್ ಹಾಗೂ ಛತ್ತೀಸ್‌ಗಢದ ಮನಸೀರ್ ಎಂದು ಗುರುತಿಸಲಾಗಿದೆ.
ಅಪಘಾತದ ರಭಸಕ್ಕೆ ಮನೆಯ ಒಂದು ಭಾಗ ಕುಸಿದಿದ್ದು, ಮನೆಯೊಳಗಿದ್ದ ಕುಟುಂಬಸ್ಥರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಇಬ್ಬರೂ ಬೋರ್‌ವೆಲ್ ಲಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದ ವೇಳೆ ವರಕ್ಕಾಡ್ ಜಂಕ್ಷನ್ ಬಳಿಯ ಕಡಿದಾದ ಇಳಿಜಾರಿನಲ್ಲಿ ಲಾರಿ ಏಕಾಏಕಿ ನಿಯಂತ್ರಣ ಕಳೆದುಕೊಂಡಿದೆ. ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯಲ್ಲಿದ್ದ ಜೇಸನ್ ಎಂಬುವವರ ಮನೆಯ ಮೇಲೆ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಅಪಘಾತದ ರಭಸಕ್ಕೆ ಮನೆಯ ಮೇಲ್ಛಾವಣಿಯ ಒಂದು ಭಾಗ ಸಂಪೂರ್ಣ ಕುಸಿದಿದೆ. ಆದರೆ ಮನೆಯೊಳಗಿದ್ದ ಜೇಸನ್ ಹಾಗೂ ಕುಟುಂಬ ಸದಸ್ಯರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಇನ್ನು, ಲಾರಿಯಲ್ಲಿದ್ದ ಭಾರೀ ಕ್ರೇನ್‌ನ ಒಂದು ಭಾಗ ಮನೆಯ ಟೆರೇಸ್‌ನ ಬದಿಗೆ ಸಿಲುಕಿಕೊಂಡಿತ್ತು. ಇದರಿಂದ ಮತ್ತಷ್ಟು ದೊಡ್ಡ ಅನಾಹುತ ಸಂಭವಿಸುವುದು ತಪ್ಪಿದೆ.
ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಲಾರಿಯನ್ನು ತೆರವುಗೊಳಿಸಿದ್ದಾರೆ.