ನಿಟ್ಟೆ ವತಿಯಿಂದ ‘ಮೂವ್ ಫಾರ್ ಹೋಪ್-2026’: ಸ್ತನ ಕ್ಯಾನ್ಸರ್ ಜಾಗೃತಿ ನಡಿಗೆ
Saturday, October 10, 2026
ಮಂಗಳೂರು: ನಿಟ್ಟೆ (ಪರಿಗಣಿತ) ವಿಶ್ವವಿದ್ಯಾಲಯ ಮತ್ತು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮ) ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಮೂವ್ ಫಾರ್ ಹೋಪ್-2026’ ಎಂಬ ಜಾಗೃತಿ ನಡಿಗೆ ಅ.10 ರಂದು ನಡೆಯಿತು.
ಮುಂಜಾನೆ ಮಂಗಳೂರಿನ ಮಹಾವೀರ ವೃತ್ತದಲ್ಲಿರುವ ನಿಟ್ಟೆ ಡೇ ಕೇರ್ ಸೆಂಟರ್‌ನಿಂದ ಆರಂಭಗೊಂಡ ಈ ಕಾರ್ಯಕ್ರಮವು ಸ್ತನ ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ, ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಮತ್ತು ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮಹತ್ವವನ್ನು ಸಾರುವ ಉದ್ದೇಶ ಪಸರಿಸಲಾಯಿತು.
ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ವಿಜಯ ಕ್ರಾಂತಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಾಲನೆ ನೀಡಿದರು. ನಿಟ್ಟೆ (ಪರಿಗಣಿತ) ವಿಶ್ವವಿದ್ಯಾಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಿಟ್ಟೆ (ಪರಿಗಣಿತ) ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ. (ಡಾ.) ಎಂ. ಶಾಂತರಾಮ ಶೆಟ್ಟಿ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ. ಬಿ. ಸಂದೀಪ್ ರೈ ಉಪಸ್ಥಿತರಿದ್ದರು.
ಬೆಳಗ್ಗೆ 6 ಗಂಟೆಗೆ ಗಣ್ಯರು ಜಾಗೃತಿ ನಡಿಗೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗ್ಗೆ 6 ರಿಂದ 7 ಗಂಟೆಯವರೆಗೆ ನಡಿಗೆ ನಡೆಯಿತು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
‘ಮೂವ್ ಫಾರ್ ಹೋಪ್-2026’ ಕಾರ್ಯಕ್ರಮವನ್ನು ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮತ್ತು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗಗಳ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಸ್ತನ ಕ್ಯಾನ್ಸರ್ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ನಿಯಮಿತ ತಪಾಸಣೆಯ ಮಹತ್ವವನ್ನು ತಿಳಿಸುವುದು, ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಹಾಗೂ ಸಕಾಲದಲ್ಲಿ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.


