ಅ.25 ರಿಂದ ನ.15ರೊಳಗೆ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’: ಸತೀಶ್ ಕುಂಪಲ
ಜಿಲ್ಲೆಯ ಗ್ರಾಪಂಗಳಿಗೆ ಚುನಾವಣೆ ನಡೆಯದೇ ಪಿಡಿಒಗಳ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರ ನಡೆಸುತ್ತಿದೆ. ಗ್ರಾಪಂನಲ್ಲಿ ಅನೇಕ ಸಮಸ್ಯೆಗಳಿದ್ದು, ಕಾಂಗ್ರೆಸ್ ಆಡಳಿತದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರಕಾರ ಯಾವುದೇ ಅನುದಾನ ನೀಡುತ್ತಿಲ್ಲ. ಕೇಂದ್ರ ಸರಕಾರದ 16ನೇ ಹಣಕಾಸು ನಿಧಿ ಮಾತ್ರ ಪ್ರಸ್ತುತ ಗ್ರಾಪಂಗೆ ಆಸರೆಯಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಬೀದಿ ದೀಪ ಉರಿಯುತ್ತಿದ್ದರೆ ಅದು ಕೇಂದ್ರ ಸರಕಾರದ ಅನುದಾನದಿಂದ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಕಾವೂರಿನಿಂದ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಪರಿಷ್ಕರಣೆ ಹೆಸರಿನಲ್ಲಿ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ. ಆ ಮೂಲಕ ಮಹಿಳೆಯರಿಗೆ ಅನ್ಯಾಯ ಎಸಗಲಾಗುತ್ತಿದೆ. ಕುಡಿಯುವ ನೀರಿನ ಶುಲ್ಕ ಹೆಚ್ಚಿಸಲಾಗಿದೆ. ವಿಧವಾ ವೇತನ, ವೃದ್ಧಾಪ್ಯ ವೇತನ ಸಹಿತ ಪಿಂಚಣಿಗಳನ್ನು ತಡೆಹಿಡಿಯಲಾಗಿದೆ. ಬಡವರಿಗೆ ಒಂದೇ ಒಂದು ಮನೆ, ನಿವೇಶನ ನೀಡಿಲ್ಲ. ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿದರು.
ಗ್ರಾಪಂಗಳಲ್ಲಿ ವಿಬಿ ಜಿರಾಮ್‌ಜಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಸರ್ವರ್ ಹಾಗೂ ಸರ್ವೆಯರ್ ಇಲ್ಲದಿರುವುದರಿಂದ ಜನರು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ. 11 ಇ ನಕ್ಷೆ, 9/11 ಆಗುತ್ತಿಲ್ಲ. ವಿದ್ಯುತ್ ಸಂಪರ್ಕ, ಡೋರ್ ನಂಬರ್ ಸಿಗುತ್ತಿಲ್ಲ. ಬಡವರ ಬಿಪಿಎಲ್ ಕಾರ್ಡ್‌ಗಳನ್ನು ತೆಗೆದುಹಾಕಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಘೋಷಿತ ಲೋಡ್‌ಶೆಡ್ಡಿಂಗ್ ಜಾರಿಗೊಳಿಸಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಪ್ರತಿಭಟನೆಯಲ್ಲಿ ಸರ್ಕಾರದ ಗಮನ ಸೆಳೆಯುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದರೂ ಸರಕಾರ ಚುನಾವಣೆ ನಡೆಸುತ್ತಿಲ್ಲ. ಈಗ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಆದರೆ, ಈ ಸರಕಾರ ಚುನಾವಣೆ ನಡೆಸುತ್ತದೆ ಎಂಬ ವಿಶ್ವಾಸವಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾವು ಸಿದ್ದ. ಕಳೆದ ಆರು ತಿಂಗಳಿನಿಂದ ನಾವು ತಯಾರಿ ನಡೆಸುತ್ತಿದ್ದೇವೆ ಎಂದರು.
ಎಸ್‌ಐಆರ್ ವಿರೋಧಿಸುವ ನೆಪದಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶ-ವಿದೇಶದ ಬೆಂಬಲಿಗರೊಂದಿಗೆ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ವತಿಯಿಂದ ಅಭಿಯಾನ ಹಮ್ಮಿಕೊಂಡಿದ್ದು, ನ.೫ರವರೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. ನ.30ರವರೆಗೆ ಸಂವಾದ ಸಹಿತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದು, ಎಸ್‌ಐಆರ್ ಬಗ್ಗೆ ಜನರಲ್ಲಿ ಜಾಗೃತಿ, ವಿಶ್ವಾಸ ಮೂಡಿಸಲಾಗುವುದು ಎಂದು ಸತೀಶ್ ಕುಂಪಲ ತಿಳಿಸಿದರು.
ಎಸ್‌ಐಆರ್ ಬಗ್ಗೆ ಮೂವರು ಚುನಾವಣಾ ಆಯುಕ್ತರು ಸ್ಪಷ್ಟನೆ ನೀಡಿದ ಬಳಿಕವೂ ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಸರಿ, ಬಿಜೆಪಿ ಗೆದ್ದರೆ ವೋಟ್ ಚೋರಿ ಎಂದು ಆರೋಪಿಸಲಾಗುತ್ತಿದೆ. ಕಾಂಗ್ರೆಸ್‌ಗೆ ಕೇರಳದಲ್ಲಿ ಎಸ್‌ಐಆರ್, ಇವಿಎಂ ಸರಿ ಇದೆ. ಅಸ್ಸಾಂ, ತ್ರಿಪುರಾದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಈ ಎಲ್ಲದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಸನ್ನ ಮಾರ್ತಾ, ಕವಿತಾ ಸನಿಲ್, ಶಾಂತಿಪ್ರಸಾದ್ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿಗಳಾದ ಪೂರ್ಣಿಮಾ, ದೇವಪ್ಪ ಪೂಜಾರಿ, ಸುಜಿತ್ ಪ್ರತಾಪ್, ದಿನೇಶ್ ಅಮ್ಟೂರ್, ಪುಷ್ಪಾ ಮೇದಪ್ಪ, ವಸಂತಿ ಮಚ್ಚಿನ, ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಜಿಲ್ಲಾ ಸಂಚಾಲಕ ವಿಕಾಸ್ ಪುತ್ತೂರು, ಪ್ರಮುಖರಾದ ಸುಮಿತ್ರಾ ಕರಿಯ, ಲಕಿತಾ ಶೆಟ್ಟಿ, ಗಣೇಶ್ ಗೌಡ ನಾವೂರು, ಶಶಿಧರ ಕಲ್ಮಂಜ, ಜಗನ್ನಾಥ, ಉಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.