ಅ.25 ರಂದು ಆಲಂಕಾರಿನಲ್ಲಿ ‘ಮಿಸ್ಟರ್ ದಕ್ಷಿಣ ಕನ್ನಡ’ ದೇಹದಾರ್ಢ್ಯ ಸ್ಪರ್ಧೆ
ಮಂಗಳೂರು: ಐರನ್ ಟೆಂಪಲ್ ಸೇವಾ ಟ್ರಸ್ಟ್ ವತಿಯಿಂದ ಕಡಬ ತಾಲೂಕಿನ ಆಲಂಕಾರಿನಲ್ಲಿ ಅ.25ರಂದು ‘ಮಿಸ್ಟರ್ ದಕ್ಷಿಣ ಕನ್ನಡ-2026’ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ಜನಾರ್ದನ ಗೌಡ ಕಯ್ಯಪೆ ಅವರು, ಆಲಂಕಾರಿನ ದೀನ ದಯಾಳು ರೈತ ಸೇವಾಭವನದಲ್ಲಿ ನಡೆಯಲಿರುವ ಈ ಸ್ಪರ್ಧೆಗೆ ಅಪರಾಹ್ನ 2.30ರ ವೇಳೆಗೆ ರಾಷ್ಟ್ರೀಯ ದೇಹದಾರ್ಢ್ಯ ಪಟು ಶಶಿಕಾಂತ್ ಉಳ್ಳಾಲ್ ಚಾಲನೆ ನೀಡುವರು. ಪಟ್ಲ ಫೌಂಡೇಶನ್ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಸೇವಾನಿಧಿ ಉದ್ಘಾಟಿಸಲಿದ್ದಾರೆ ಎಂದರು.
ಸ್ಪರ್ಧೆಯಲ್ಲಿ ಜಿಲ್ಲೆಯ 250ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ವಿಭಾಗಗಳ ವಿಜೇತರಿಗೆ ರೂ.೩ ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನ, ಟ್ರೋಫಿ ಹಾಗೂ ಪದಕಗಳನ್ನು ನೀಡಲಾಗುವುದು. ಪ್ರಮುಖ ವಿಭಾಗದ ವಿಜೇತರಿಗೆ ರೂ.1 ಲಕ್ಷ ಬಹುಮಾನ ನೀಡಲು ಉದ್ದೇಶಿಸಲಾಗಿದೆ ಎಂದವರು ವಿವರಿಸಿದರು.
ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ಜರಗಲಿದೆ. ದ.ಕ.ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ಅಶೋಕ್ ಕುಮಾರ್ ರೈ, ಹರೀಶ್ ಪೂಂಜಾ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸುವರು. ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ವಹಿಸುವರು ಎಂದು ಜನಾರ್ದನ ಗೌಡ ತಿಳಿಸಿದರು.
ಕ್ರೀಡಾ ಪ್ರೋತ್ಸಾಹದ ಜತೆಗೆ ಸಮಾಜಮುಖಿ ಕಾರ್ಯದ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ವೆಚ್ಚ ಭರಿಸಿದ ಬಳಿಕ ಉಳಿಯುವ ಮೊತ್ತವನ್ನು ತಂದೆ ಹಾಗೂ ಪತಿಯ ಆಸರೆಯಿಲ್ಲದೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಆಲಂಕಾರಿನ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಲು ನೀಡಲಾಗುವುದು ಎಂದು ಅವರು ವಿವರ ನೀಡಿದರು.
ಟ್ರಸ್ಟ್ನ ಪ್ರಮುಖರಾದ ರಾಜೇಶ್ ಆಳ್ವ, ಶಶಿಕಾಂತ್ ಉಳ್ಳಾಲ್, ಹರ್ಷಿತ್ ಹಾಗೂ ಅಕ್ಷಯ್ ಉಪಸ್ಥಿತರಿದ್ದರು.