ಸೌಜನ್ಯ ಪ್ರಕರಣ: ವಕೀಲ ಅಮೃತೇಶ್ ವಿರುದ್ಧ ಸೌಜನ್ಯ ತಾಯಿ ಧರ್ಮಸ್ಥಳ ಠಾಣೆಗೆ ದೂರು
ಮಂಗಳೂರು: ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಹೇಳಿಕೆ ನೀಡಿ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಆರೋಪಿಸಿ, ವಕೀಲ ಎನ್.ಪಿ. ಅಮೃತೇಶ್ ವಿರುದ್ಧ ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಕೀಲ ವಿಜಯ್ ವಾಸು ಪೂಜಾರಿ ಅವರ ಮೂಲಕ ಅ.17ರಂದು ಸಲ್ಲಿಸಿರುವ ದೂರಿನಲ್ಲಿ, ಅ.13ರಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೃತೇಶ್ ಅವರು ಸೌಜನ್ಯ ಅವರ ಪೋಷಕರು ಪ್ರಕರಣದಿಂದ ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬರ್ಥದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಹೇಳಿಕೆಗಳು ಸಂತ್ರಸ್ತೆಯ ಕುಟುಂಬದ ಗೌರವಕ್ಕೆ ಧಕ್ಕೆ ತರುವುದರ ಜತೆಗೆ, ತನಿಖೆಗೆ ಸಹಕರಿಸಬಹುದಾದ ಸಂಭಾವ್ಯ ಸಾಕ್ಷಿಗಳ ಮೇಲೆ ಒತ್ತಡ ಉಂಟುಮಾಡಬಹುದು. ಹೀಗಾಗಿ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಅ.13ರಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೃತೇಶ್ ಅವರು, ಸೌಜನ್ಯ ಪ್ರಕರಣದ ತನಿಖೆ ತಾರ್ಕಿಕ ಅಂತ್ಯ ತಲುಪುವುದು ಅಸಾಧ್ಯ, ಮೂರು ತಿಂಗಳಲ್ಲಿ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ, 14 ವರ್ಷಗಳಷ್ಟು ಹಳೆಯ ಸಾಕ್ಷ್ಯಗಳನ್ನು ಈಗ ಪತ್ತೆಹಚ್ಚುವುದು ಕಷ್ಟ ಎಂದು ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸಂತೋಷ್ ರಾವ್ ಅವರನ್ನು ಮರುತನಿಖೆಗೆ ಒಳಪಡಿಸಬೇಕು ಎಂಬ ಹೇಳಿಕೆಯನ್ನೂ ಅವರು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಸುಪ್ರೀಂ ಕೋರ್ಟ್ 2026ರ ಸೆ.21ರಂದು ಪ್ರಕರಣದ ಮರುತನಿಖೆಗೆ ನಿರ್ದೇಶನ ನೀಡಿ, ಮೂರು ತಿಂಗಳ ಕಾಲಮಿತಿ ವಿಧಿಸಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಸೆ.24ರಂದು ಎಸ್‌ಐಟಿ ರಚಿಸಿತ್ತು. ಅ.1ರಿಂದ ತನಿಖೆ ಆರಂಭವಾಗಿದ್ದು, ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಹೇಳಿಕೆಗಳನ್ನು ನೀಡಿರುವುದು ತನಿಖೆಯ ನಿಷ್ಪಕ್ಷಪಾತತೆ ಮತ್ತು ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ದೂರುದಾರರ ವಾದ.