ನ.3 ರಿಂದ 15ರವರೆಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ: ಅಂತರಾಷ್ಟ್ರೀಯ ಕಾರ್ಯಕ್ರಮಕ್ಕೆ ಕಡಲನಗರಿ ಸಜ್ಜು-ಅತೀ ದೀರ್ಘ ಅವಧಿಯ ಸಮೂಹ ಗಾಯನದ ಗಿನ್ನೆಸ್ ದಾಖಲೆಗೆ ಸಿದ್ದತೆ

ನ.3 ರಿಂದ 15ರವರೆಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ: ಅಂತರಾಷ್ಟ್ರೀಯ ಕಾರ್ಯಕ್ರಮಕ್ಕೆ ಕಡಲನಗರಿ ಸಜ್ಜು-ಅತೀ ದೀರ್ಘ ಅವಧಿಯ ಸಮೂಹ ಗಾಯನದ ಗಿನ್ನೆಸ್ ದಾಖಲೆಗೆ ಸಿದ್ದತೆ


ಮಂಗಳೂರು: ನ.3 ರಿಂದ 15ರವರೆಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನಕ್ಕೆ ಕಡಲನಗರಿ ಮಂಗಳೂರು ಸಜ್ಜುಗೊಂಡಿದೆ. ಈ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಅತೀ ದೀರ್ಘ ಅವಧಿಯ ಸಮೂಹ ಗಾಯನದ ಗಿನ್ನೆಸ್ ದಾಖಲೆಗೂ ಮಾಂಡ್ ಸೊಭಾಣ್ ಸಿದ್ದತೆ ನಡೆಸಿದೆ.

ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ, ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ 40ನೇ ವರ್ಷಾಚರಣೆಯ ಮಾಣಿಕ್ಯೋತ್ಸವದ ಹಿನ್ನೆಲೆಯಲ್ಲಿ ಕೊಂಕಣಿಯ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಉದ್ದೇಶದಿಂದ ಮಂಗಳೂರಿನ ಪುರಭವನದಲ್ಲಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕೊಂಕಣಿಯ ಎಲ್ಲಾ ಕ್ಷೇತ್ರಗಳಿಗೆ ಪ್ರಮುಖವಾಗಿ ಕೊಂಕಣಿ ಸಂಗೀತಕ್ಕೆ ಮೇರು ಕೊಡುಗೆ ನೀಡಿದ ಮಾಂಡ್ ಸೊಭಾಣ್ ಗುರಿಕಾರ ದಿ. ಎರಿಕ್ ಒಝೇರಿಯೊ ಅವರ ಗೌರವಾರ್ಥ ನಡೆಯುವ ಈ ಮಹಾ ಸಮ್ಮೇಳನದಲ್ಲಿ ವಿವಿಧ ಕಾರ್ಯಕ್ರಮಗಳು ಸಂಯೋಜನೆಗೊಂಡಿವೆ ಎಂದರು.

ನ.3ರಂದು ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಬೆಳಿಗ್ಗೆ 5 ಗಂಟೆಗೆ ಪುರಭವನದಲ್ಲಿ ಉದ್ಘಾಟಿಸಲಿದ್ದು, ಮಂಗಳೂರು ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಆಶೀರ್ವಚನ ನೀಡಲಿರುವರು. ಸ್ವಾಗತ ಸಮಿತಿ ಅಧ್ಯಕ್ಷ ಡಾ. ರೊನಾಲ್ಡ್ ಕುಲಾಸೊ ಅಧ್ಯಕ್ಷತೆ ವಹಿಸುವರು ಎಂದರು.

ಕಾರ್ಯಕ್ರಮದಲ್ಲಿ ಅತೀ ದೀರ್ಘ ಅವಧಿಯ ಸಮೂಹ ಗಾಯನದ ಗಿನ್ನೆಸ್ ದಾಖಲೆಗೆ ರಚಿಸಲು ಪ್ರಯತ್ನಿಸಲಾಗುವುದು, ಜತೆಗೆ ಶೈಕ್ಷಣಿಕ ಮೆರುಗು ಹಾಗೂ ಅಂತರಾಷ್ಟ್ರೀಯ ಆಯಾಮ ನೀಡಲು 12 ವಿಚಾರ ಗೋಷ್ಟಿಗಳನ್ನು ಆಯೋಜಿಸಲಾಗಿದೆ. ಕೊಂಕಣಿ ಸಂಗೀತಕ್ಕೆ ಮಹತ್ತರ ಕೊಡುಗೆ ನೀಡಿದ 12 ಹಿರಿಯ ಸಂಗೀತಗಾರರಿಗೆ ಶ್ವ ಕೊಂಕಣಿ ಸಂಗೀತ ಸಾಧನಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ಕೊಂಕಣಿ ನಿರಂತರಿ ಶೈಲಿಯ ಸಂಗೀತ ಸಂಜೆ, ಪುರಭವನದ ಹೊರಾಂಗಣದಲ್ಲಿ ಕೊಂಕಣಿ ಸಂಗೀತದ ಬಗ್ಗೆ ಮಾಹಿತಿ ನೀಡುವ, ಕೊಂಕಣಿ ಜನ ಜೀವನ, ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನ ನಡೆಯಲಿದೆ, ಕೊಂಕಣಿ ಸಂಗೀತಕ್ಕೆ ಹಿರಿಮೆ ತಂದುಕೊಟ್ಟ ಹಿರಿ-ಕಿರಿಯ ಸಂಗೀತಗಾರರ ಬಗ್ಗೆ ಮಾಹಿತಿ ಮಂದಿರ, ಕೊಂಕಣಿಯ ವಿವಿಧ ಸಮುದಾಯಗಳ ಖಾದ್ಯ ವೈವಿಧ್ಯಗಳ ಮಾರಾಟ ಮಳಿಗೆಗಳು ಇರಲಿವೆ. ನ.15 ರಂದು ಸಂಜೆ 6.12 ಕ್ಕೆ ಗಿನ್ನೆಸ್ ದಾಖಲೆಯ ಗಾಯನ ಅಂತ್ಯವಾಗಲಿದ್ದು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಆರ್ಥಿಕ ಸಮಿತಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಪ್ರಧಾನ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ, ಮಾಂಡ್ ಸೊಭಾಣ್ ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ, ಗೋವಾ ಸಂಯೋಜಕ ಮೈಕಲ್ ಜೂಡ್ ಗ್ರೇಶಿಯಸ್ ಉಪಸ್ಥಿತಿದ್ದರು.

 ಗಿನ್ನೆಸ್ ವಿಶ್ವ ದಾಖಲೆಗೆ ಪ್ರಯತ್ನ:

ನ.3 ಬೆಳಗ್ಗೆ 6 ಗಂಟೆಯಿಂದ ಮುಂದಿನ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ, ಅತೀ ದೀರ್ಘ ಅವಧಿಯ, ಸಮೂಹ ಗಾಯನದ ಗಿನ್ನೆಸ್ ದಾಖಲೆ ರಚಿಸುವ ಕಾರ್ಯಕ್ರಮ ಸಂಯೋಜನೆಗೊಳ್ಳಲಿದೆ. ಕೊಂಕಣಿ ನಿರಂತರಿ ಸಂಸಾರ್ ಸರಾಸರಿ’ (ಕೊಂಕಣಿ ನಿರಂತರವಾಗಿರಲಿ - ಜಗದ ಕೊನೆತನಕ ಉಳಿಯಲಿ) ಹೆಸರಿನ ಈ ಪ್ರಯತ್ನದಲ್ಲಿ ಭಾರತ, ಆಸ್ಟ್ರೇಲಿಯಾ, ಕುವೇಯ್ಟ, ಓಮನ್, ಖತಾರ್ ದೇಶಗಳಿಂದ ಕ್ರೈಸ್ತ-ಹಿಂದೂ-ಮುಸ್ಲಿಮ್-ಧರ್ಮಗಳಿಗೆ ಸೇರಿದ ಕ್ರೈಸ್ತ, ಜಿ.ಎಸ್.ಬಿ., ಕುಡಾಲ್ ದೇಶಸ್ಥ, ಖಾರ್ವಿ, ಕುಡುಮಿ, ಸಿದ್ದಿ, ನವಾಯತಿ, ಸಿರಿಯನ್ ಕ್ರೈಸ್ತ ಇತ್ಯಾದಿ ವಿವಿಧ ಕೊಂಕಣಿ ಜನಸಮುದಾಯಗಳು ಹಾಗೂ ಇತರೆ ಭಾಷಿಕ ಜನರು ಭಾಗವಹಿಸಲಿರುವರು. 6789+ ಗಾಯಕರು, 250+ ಸಂಗೀತ ಸಂಯೋಜಕರು ರಚಿಸಿದ, ವಿವಿಧ ಭಾಷಾ ಪ್ರಬೇಧಗಳ 4500+ ಕೊಂಕಣಿ ಹಾಡುಗಳನ್ನು ಹಾಡಲಿರುವರು. ಒಟ್ಟು 300 ತಂಡಗಳು ತಲಾ ಒಂದು ಗಂಟೆ ಹಾಡಿ ಈ ದಾಖಲೆ ಬರೆಯಲಿದ್ದಾರೆ. ಸಂಗೀತ ಗುರು’ ಜೊಯೆಲ್ ಪಿರೇರಾ ಈ ದಾಖಲೆಯ ಪ್ರಧಾನ ಸಂಗೀತ ನಿರ್ದೇಶಕ. ಈಗಾಗಲೇ ಗಿನ್ನೆಸ್ ದಾಖಲೆ ಬಗ್ಗೆ ಲಂಡನ್ನಿನ ಕಚೇರಿಯಲ್ಲಿ ನೋಂದಣಿಯಾಗಿದ್ದು, ಅಧಿಕೃತ ಹಿರಿಯ ತೀರ್ಪುಗಾರರು ಭಾಗವಹಿಸಲಿದ್ದಾರೆ.

ಶೈಕ್ಷಣಿಕ ಮೆರುಗು ಹಾಗೂ ಅಂತರಾಷ್ಟ್ರೀಯ ಆಯಾಮ:

ಸಮ್ಮೇಳನದಲ್ಲಿ 12 ವಿಚಾರಗೋಷ್ಟಿ ಆಯೋಜಿಸಲಾಗಿದ್ದು, ಕೊಂಕಣಿ ಭಕ್ತಿ ಸಂಗೀತ-ಗೋವಾ (ಫಾ. ಒನೆಸಿಸ್ ಡಿಕ್ರೂಜ್), ಕೊಂಕಣಿ ಭಕ್ತಿ ಸಂಗೀತ-ಮಂಗಳೂರು ಮತ್ತು ಇತರೆಡೆ (ಫಾ ಜಯಪ್ರಕಾಶ್ ಡಿಸೋಜ), ಕೊಂಕಣಿ ಜನಪದ ಸಂಗೀತ-ಗೋವಾ (ಡಾ. ಕೊಸ್ಮೊ ಫೆನಾರ್ಂಡಿಸ್), ಕೊಂಕಣಿ ಜನಪದ ಸಂಗೀತ-ಮಂಗಳೂರು ಮತ್ತು ಇತರೆಡೆ (ಡಾ. ಪ್ರೀತಿ ಕೀರ್ತಿ ಡಿಸೋಜ), ಆರೋಗ್ಯಕ್ಕಾಗಿ ಸಂಗೀತ (ಅಂಕುಶ್ ನಾಯಕ್), ಅಂತರರಾಷ್ಟ್ರೀಯ ಸಂಗೀತ (ಡಾ. ಪಾವ್ಲೊ ಪಚಿಯೊಲಾ), ಬಾಯ್ಲ ಸಂಗೀತ (ಆಲ್ವಿನ್ ಫೆನಾರ್ಂಡಿಸ್), ಸಂಗೀತಗಾರರು ಮತ್ತು ಅವರ ರಚನೆಗಳು (ನೀತಾ ರೆಬೆಲ್ಲೊ), ರಂಗಭೂಮಿ ಮತ್ತು ಸಿನೆಮಾ ಸಂಗೀತ (ಕ್ಯಾಜಿಟನ್ ಡಾಯಸ್), ಮಾಂಡ್ ಸೊಭಾಣ್ ಸಂಗೀತದ ಪ್ರಭಾವ (ವಂ. ಡಾ. ಆಲ್ವಿನ್ ಸೆರಾವೊ), ಬೌದ್ಧಿಕ ಆಸ್ತಿ ಹಕ್ಕುಗಳು (ಡಾ. ಸಾಯೊನಾರಾ ಟೆಲ್ಲೆಸ್), ಯಾಂತ್ರಿಕ ಬುದ್ದಿಮತ್ತೆ ಮತ್ತು ಸಂಗೀತ (ವಂ. ಡಾ. ವಿಕ್ಟರ್ ಫೆರಾವೊ) ಪ್ರಬಂಧ ಮಂಡಿಸಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article