ಅ.30ರಿಂದ ಕದ್ರಿಯಲ್ಲಿ ಸಿರಿ ಸಸ್ಯೋತ್ಸವ -2026‘
ಮಂಗಳೂರು: ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆ ಸಿರಿ ತೋಟಗಾರಿಕಾ ಸಂಘದಿಂದ ಅ.30ರಿಂದ ನ.1ರ ವರೆಗೆ ನಗರದ ಕದ್ರಿ ಉದ್ಯಾನವನದಲ್ಲಿ ‘ಸಿರಿ ಸಸ್ಯೋತ್ಸವ -2026‘ ಮೂರು ದಿನಗಳ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೂರು ದಿನಗಳ ಕಾರ್ಯಕ್ರಮದಲ್ಲಿ ಅಲಂಕಾರಿಕ ಸಸ್ಯಗಳು, ಔಷಽಯ ಸಸ್ಯಗಳು, ಅಪರೂಪದ ಸಸ್ಯಗಳು, ಅರಣ್ಯ ಸಸ್ಯಗಳು, ಪುಷ್ಪ ವಿನ್ಯಾಸಗಳು, ಬೋನ್ಸಾಯಿ ಸಸ್ಯಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಔಷಧೀಯ ಸಸ್ಯಗಳ ಪ್ರದರ್ಶನದಲ್ಲಿ 150ಕ್ಕೂ ಹೆಚ್ಚಿನ ವಿವಿಧ ಔಷಧೀಯ ಸಸ್ಯಗಳು, 20ಕ್ಕೂ ಅಽಕ ವಿವಿಧ ಬೀಜಗಳ ಮಾರಾಟ ಮತ್ತು ಪ್ರದರ್ಶನವಿದೆ. ಅರಣ್ಯ ಸಸ್ಯಗಳ ವಿಭಾಗದಲ್ಲಿ 25 ವಿಧದ ಅರಣ್ಯ ಸಸ್ಯಗಳು, ಬೀಜಗಳು ಪ್ರದರ್ಶನವಿದೆ. ತರಕಾರಿ ಬೀಜ ವಿಭಾಗದಲ್ಲೂ 40ಕ್ಕೂ ಅಧಿಕ ಬೀಜಗಳ ಪ್ರದರ್ಶನ, ಮಾರಾಟವಿದೆ. ರಾಶಿ ವನ ಹಾಗೂ ನವಗ್ರಹ ವನಗಳ ಪ್ರದರ್ಶನ ಮಾಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ. ಪ್ರವೀಣ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸ್ವೋದ್ಯೋಗಿಗಳ, ಕುಶಲ ಕರ್ಮಿಗಳ, ಯಂತ್ರೋಪಕರಣಗಳ ಮಾರಾಟಗಾರರ ಮಳಿಗೆ ಇರಲಿದೆ. ಸಾವಯವ ಗೊಬ್ಬರ, ಸಿರಿಧಾನ್ಯಗಳ ಮೌಲ್ಯವಽತ ಉತ್ಪನ್ನಗಳು, ವಿವಿಧ ಹಣ್ಣು-ಹೂವಿನ ಗಿಡಗಳ ಮಾರಾಟ ನಡೆಯಲಿದೆ. ಸುಮಾರು 70 ಮಳಿಗೆಗಳು ಇರಲಿವೆ. 5 ರೂಪಾಯಿಗೆ ತರಕಾರಿ ಗಿಡಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 20 ಸಾವಿರ ಗಿಡಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಅ.30ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ. ಪ್ರರ್ದಶನ ಬೆಳಗ್ಗೆ 9ರಿಂದ ರಾತ್ರಿ 8.30ರ ವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.
ಅ.30ರಂದು ಮಧ್ಯಾಹ್ನ 2 ಗಂಟೆಯಿಂದ ಮಹಿಳೆಯರಿಗೆ ಪುಷ್ಪ ಜೋಡಣೆ, ಪುಷ್ಪ ರಂಗೋಲಿ ಸ್ಪರ್ಧೆಗಳು ನಡೆಯಲಿವೆ. ಅ.31ರಂದು ಬೆಳಗ್ಗೆ 10ರಿಂದ ತಾರಸಿ ಕೈತೋಟ ಮತ್ತು ಜೇನುಕೃಷಿ ತರಬೇತಿ, ಮಧ್ಯಾಹ್ನ 2ರಿಂದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ನ.1ರಂದು ಬೆಳಗ್ಗೆ 10ರಿಂದ ಕಸಿಕಟ್ಟುವ ತರಬೇತಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜತೆ ಕಾರ್ಯದರ್ಶಿ ಅನಂತರಾಮ ಹೇರಳೆ, ಖಜಾಂಚಿ ಹರಿಶ್ಚಂದ್ರ ಅಡ್ಕ, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ವಿ.ಕೆ. ಭಟ್ರಕೋಡಿ, ಸಿರಿಲ್ ರಾಬರ್ಟ್ ಡಿಸೋಜ, ಜಿ.ಕೆ. ಭಟ್, ಅಶ್ವಿನ್ ಸಿಕ್ವೇರ ಉಪಸ್ಥಿತರಿದ್ದರು.