ಅ.5ರಂದು ‘ಕೊಡಿಯಡಿತ ನಿರೇಲ್’

ಅ.5ರಂದು ‘ಕೊಡಿಯಡಿತ ನಿರೇಲ್’

ಮಂಗಳೂರು: ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಅ.5ರಂದು ‘ಕೊಡಿಯಡಿತ ನಿರೇಲ್’ ಎಂಬ ದೈವ ಪರಿಚಾರಕರ ಕೂಡುವಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಜಿಲ್ಲೆಯ ದೈವ ಪರಿಚಾರಕರು ಒಟ್ಟು ಸೇರಲಿದ್ದು, ಈಗಾಗಲೇ ಟ್ರಸ್ಟ್‌ನಡಿ 450ಕ್ಕೂ ಅಧಿಕ ಮಂದಿ ನೋಂದಣಿಯಾಗಿದ್ದಾರೆ. 2025ರ ಜನವರಿ 28ರಂದು ಟ್ರಸ್ಟ್ ಸ್ಥಾಪನೆಯಾಗಿದ್ದು, ದಾನಿಗಳ ನೆರವಿನೊಂದಿಗೆ ದೈವದ ಚಾಕರಿ ಮಾಡುವ ಪರಿಚಾರಕರ ಜೀವನಕ್ಕೆ ಅಗತ್ಯವಾದ ಭದ್ರತೆಗೆ ಶ್ರಮಿಸಲಾಗುತ್ತಿದೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರ ಮಾರ್ಗದರ್ಶನದಲ್ಲಿ ಪುರಭವನದಲ್ಲಿ 2ನೇ ವರ್ಷದ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮಿನಾರಾಯಣ ಎಂ. ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾವಂತೂರು ಬಲವಂಡಿ ಪಿಲ್ಚಂಡಿ ದೈವ ಕ್ಷೇತ್ರದ ಗಡಿಕಾರ ದುರ್ಗಾ ಪ್ರಸಾದ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಟ್ರಸ್ಟ್‌ನ ಫಲಾನುಭವಿಗಳಿಗೆ ವಿಮಾ ಯೋಜನೆ ಹಸ್ತಾಂತರವನ್ನು ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ನಿರ್ವಹಿಸಲಿದ್ದಾರೆ. ಸಂಸ್ಥೆಯ ಸದಸ್ಯರ ಡಿಜಿಟಲ್ ಐಡಿ ಕಾರ್ಡ್ ವಿತರಿಸುವ ಕಾರ್ಯಕ್ಕೆ ಈ ಸಂದರ್ಭ ಚಾಲನೆ ನೀಡಲಾಗುವುದು. ಟ್ರಸ್ಟ್‌ನ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಪುರಸ್ಕರಿಸಲಾಗುವುದು. ಬೆಳಗ್ಗೆ 11.30ರಿಂದ ಚಾಪರ್ಕ ತಂಡದ ಕಲಾವಿದರಿಂದ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು.

ದೈವಗಳ ಸೇವೆ ಮಾಡುವ 16 ವರ್ಗದ ಪರಿಚಾರಕರಿಗೆ ದೈವಾರಾಧನೆಯಲ್ಲಿ ದೈವದ ಸೇವೆಯ ಸಮಯ ಸಿಗುವ ಗೌರವ ಧನವೇ ಕುಟುಂಬ ಸದಸ್ಯರ ಪೋಷಣೆಗೆ ಆಧಾರ. ಪರಿಚಾರ ವ್ಯಕ್ತಿಗಳು ಅಪಘಾತ, ಸಾವು, ಮಾರಕ ರೋಗಗಳಿಗೆ ತುತ್ತಾಗುವ ಸಂದರ್ಭ ಕುಟುಂಬಕ್ಕೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ದೈವಗಳ ಚಾಕರಿ ಮಾಡುವ ಪರಿಚಾರಕರಿಗೆ ಜೀವನ ಭದ್ರತೆ ದೃಷ್ಟಿಯಿಂದ ವಿಮಾ ಯೋಜನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸವಲತ್ತು, ಬಡ ಹೆಣ್ಣು ಮಕ್ಕಳ ವಿವಾಹ ಸಂಬಂಧಪಟ್ಟಂತೆ ಆರ್ಥಿಕ ನೆರವಿನ ಜತೆಗೆ ದೈವಾರಾಧನೆಗೆ ಸಂಬಂಧಪಟ್ಟಂತೆ ಚಲನಚಿತ್ರ, ನಾಟಕ, ಸ್ತಬ್ಧಚಿತ್ರ, ಸಾಮಾಜಿಕ ಜಾಲತಾಣಗಳಲ್ಲಿ ದೈವಗಳ ವೇಷ ಭೂಷಣ ಧರಿಸಿ ನಿಂದನೆ ಮಾಡುವ ಬಗ್ಗೆ ಕಾನೂನಾತ್ಮಕ ಹೋರಾಟ ಟ್ರಸ್ಟ್ ಮೂಲಕ ನಡೆಯಲಿದೆ ಎಂದರು.

ಗೌರವಾಧ್ಯಕ್ಷ ಸದಾಶಿವ ಪೂಜಾರಿ, ಉದಯ ಸಾಲ್ಯಾನ್, ಉಪಾಧ್ಯಕ್ಷ ವಿಜಯ್, ಕೋಶಾಧಿಕಾರಿ ಜಿತೇಶ್, ಕಾರ್ಯದರ್ಶಿ ಸುದರ್ಶನ್, ಸಲಹೆಗಾರ ಹರ್ಷ ಕುಮಾರ್, ಉಪ ಕಾರ್ಯದರ್ಶಿ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article