ಅ.6 ರಂದು ‘ಲವ್ ಜಿಹಾದ್ ಮತ್ತು ಮತಾಂತರ-ಪ್ರಚಾರ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ

ಅ.6 ರಂದು ‘ಲವ್ ಜಿಹಾದ್ ಮತ್ತು ಮತಾಂತರ-ಪ್ರಚಾರ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ

ಮಂಗಳೂರು: ಕಾಂಗ್ರೆಸ್ ಮುಖಂಡ, ಲೇಖಕ ಎಂ.ಜಿ. ಹೆಗಡೆ ಅವರು ರಚಿಸಿದ ‘ಲವ್ ಜಿಹಾದ್ ಮತ್ತು ಮತಾಂತರ-ಪ್ರಚಾರ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅ.6 ರಂದು ಮಧ್ಯಾಹ್ನ 3.30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಕಳೆದ 10 ವರ್ಷಗಳಲ್ಲಿ ಲವ್ ಜಿಹಾದ್, ಮತಾಂತರ, ಮದರಸಗಳಲ್ಲಿ ಭಯೋತ್ಪಾದನೆ ಮುಂತಾದ ಆರೋಪಗಳ ಕುರಿತು ದಾಖಲಾದ ದೂರು, ಮನವಿಗಳ ಮಾಹಿತಿಯ ದಾಖಲೆಯನ್ನು ಪುಸ್ತಕ ಒಳಗೊಂಡಿದೆ. 14 ಜಿಲ್ಲೆಗಳ ಸುಮಾರು 350 ಠಾಣೆಗಳಿಂದ ಆರ್‌ಟಿಐ ಮೂಲಕ ಪಡೆದ ಮಾಹಿತಿ ಹಾಗೂ ವಿಮರ್ಶೆಯಿದೆ. ರಾಜ್ಯ ಗೃಹ ಇಲಾಖೆಗೆ ನೀಡಿದ ದೂರು, ಮನವಿಗಳ ಕುರಿತ ವಿವರವಿದೆ. ರಾಷ್ಟ್ರದಲ್ಲಿ ಉಲ್ಲೇಖಗೊಂಡ 11 ಲವ್ ಜಿಹಾದ್ ಪ್ರಕರಣಗಳ ತನಿಖಾ ಮಾಹಿತಿ, ನ್ಯಾಯಾಲಯದ ತೀರ್ಪುಗಳ ವಿವರವಿದೆ ಎಂದು ಪುಸ್ತಕ ಬಿಡುಗಡೆ ಸಮಿತಿ ಅಧ್ಯಕ್ಷ, ವಕೀಲ ಯಶವಂತ ಮರೋಳಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿ ಉಪಾಧ್ಯಕ್ಷ ರವಿ ಪೂಜಾರಿ ಸೂರಿಂಜೆ ಮಾತನಾಡಿ, ಕಾರ್ಯಕ್ರಮದಲ್ಲಿ ಮೊದಲಿಗೆ ಖ್ಯಾತ ಕಲಾವಿದರಿಂದ ಶರಸೇತು ಬಂಧನ ತಾಳಮದ್ದಳೆ ನಡೆಯಲಿದೆ. ಜಬ್ಬಾರ್ ಸಮೊ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಎಂ.ಜಿ. ಹೆಗಡೆ ಅರ್ಥಧಾರಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5.30ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಚಿಂತಕ ಲಕ್ಷ್ಮೀಶ ಗಬ್ಲಡ್ಕ ಉದ್ಘಾಟಿಸಲಿದ್ದಾರೆ. ವಕೀಲ, ಹೋರಾಟಗಾರ ಸುಧೀರ್ ಮುರೊಳ್ಳಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಾಮಾಜಿಕ ಮುಖಂಡ ಪ್ರವೀಣ್ ವಾಲ್ಕೆ ದಾಖಲೆಗಳ ಪ್ರದರ್ಶಿನಿ ಉದ್ಘಾಟಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಮಂಜುಳಾ ನಾಯಕ್, ಯೋಗೀಶ್ ನಾಯಕ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article