ಉರ್ವ ಮಾರಿಗುಡಿ: ಇಲ್ಲಿ ಚಿನ್ನದ ಮೀನುಗಳೇ ಆಭರಣ
ಉರ್ವದ ಮಾರಿಯಮ್ಮ ಮತ್ತು ಮಂಗಳಾದೇವಿ ಸಹೋದರಿಯರು ಎಂದು ಐತಿಹ್ಯಗಳು ಹೇಳುತ್ತವೆ. ಉರ್ವದಲ್ಲಿ ನೆಲೆ ನಿಂತ ಭಕ್ತರೋರ್ವರ ಕನಸಿನಲ್ಲಿ ದೇವತೆ ಬಂದು ನನಗೆ ನೆಲೆ ಒದಗಿಸಿಕೊಡು ಎಂದು ಹೇಳಿದರು. ಆ ಭಕ್ತರು ಇಲ್ಲಿ ದೇವಿಯ ಆಲಯ ಸ್ಥಾಪನೆ ಮಾಡಿದರು ಎಂಬ ಕಥೆಯೂ ಇದೆ.
ಈ ಕ್ಷೇತ್ರದಲ್ಲಿ ನವರಾತ್ರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಮಾಡಲು ವಾಹನಗಳ ಮಾಲಕ, ಚಾಲಕರು ಬಹು ಸಂಖ್ಯೆಯಲ್ಲಿ ಬರುತ್ತಾರೆ.
ದೇವಿ ದರ್ಶನವನ್ನು ಹತ್ತಿರದಿಂದ ಪಡೆಯಬಹುದಾದ ಕ್ಷೇತ್ರ ಇದು. ಒಂದು ಕಾಲದಲ್ಲಿ ಮೀನುಗಾರ ಸಮುದಾಯಕ್ಕೆ ಸೀಮಿತವಾಗಿದ್ದ ಉರ್ವದ ಮಾರಿಯಮ್ಮ ಕಾಲಕ್ರಮೇಣ ಸರ್ವರ ಆರಾಧನಾ ದೇವಿಯಾಗಿದ್ದಾರೆ.
ಮೀನುಗಾರರು ತಮ್ಮ ಕಷ್ಟಕಾಲದಲ್ಲಿ ಉರ್ವ ಮಾರಿಯಮ್ಮರನ್ನು ಸ್ಮರಿಸುತ್ತಾರೆ. ಸಮುದ್ರದಲ್ಲಿ ಮೀನು ಕೊರತೆಯಾದಾಗ ದೇವಿಗೆ ಮೊರೆ ಇಡುತ್ತಾರೆ. ಕಷ್ಟಗಳು ಪರಿಹಾರವಾದಾಗ ಹರಕೆ ಸಲ್ಲಿಸುತ್ತಾರೆ.
ದೇವಿಯನ್ನು ಅಲಂಕರಿಸುವ ಚಿನ್ನಾಭರಣಗಳಲ್ಲಿ ಭೂತಾಯಿ ಸರ, ಬಂಗುಡೆ ಸರ, ಸಿಗಡಿ ಸರಗಳು, ಮಾಂಜಿ ಸರಗಳು ಇವೆ. ಇವು ಮೀನುಗಾರ ಸಮುದಾಯ ತಮಗೆ ಆದಾಯ ಮತ್ತು ಪ್ರಾಣ ಭದ್ರತೆ ನೀಡಿ ಕಾಪಾಡಿದ ದೇವಿಗೆ ಕೃತಜ್ಞತಾ ಪೂರ್ವಕವಾಗಿ ಸಲ್ಲಿಸಿದ ಕಾಣಿಕೆಗಳು.
ಇಂದಿಗೂ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಮೀನುಗಾರರು ಆದಾಯದ ಒಂದಂಶವನ್ನು ದೇವಿಗೆ ಅರ್ಪಿಸುವ ಪರಂಪರೆ ಮುಂದುವರೆದಿದೆ.
ಉರ್ವ ಮಾರಿಯಮ್ಮ ಗುಡಿಯ ಸುತ್ತಮುತ್ತ ನವರಾತ್ರಿ ದೀಪಾಲಂಕಾರ ಗಮನ ಸೆಳೆಯುತ್ತಿರುತ್ತದೆ. ನವರಾತ್ರಿಯಲ್ಲಿ ದಿನನಿತ್ಯ ಅನ್ನ ಪ್ರಸಾದವಿರುತ್ತದೆ. ಉಳಿದಂತೆ ಮಂಗಳವಾರ ಮತ್ತು ಶುಕ್ರವಾರ ಅನ್ನ ಪ್ರಸಾದ ಇರುತ್ತದೆ.