ಸಸಿಹಿತ್ಲು ಭಗವತಿ ಕ್ಷೇತ್ರ: ಮರಳೇ ಇಲ್ಲಿ ಪ್ರದಕ್ಷಿಣಾ ಪಥ

ಸಸಿಹಿತ್ಲು ಭಗವತಿ ಕ್ಷೇತ್ರ: ಮರಳೇ ಇಲ್ಲಿ ಪ್ರದಕ್ಷಿಣಾ ಪಥ


ಮಂಗಳೂರು: ನವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಕರಾವಳಿ ತೀರದ ಶಕ್ತಿ ಪೀಠಗಳಲ್ಲಿ ಸಸಿಹಿತ್ಲು ಶ್ರೀ ಭಗವತಿ ದೇವಾಲಯವೂ ಒಂದು. ಶ್ರೀ ಭಗವತಿ ಇಲ್ಲಿಯ ಮುಖ್ಯ ದೇವತೆ.

ಶಾಂಭವಿ ನದಿ ಮತ್ತು ನಂದಿನಿ ನದಿಗಳ ನಡುವಿನ ಭೂಪ್ರದೇಶದಲ್ಲಿರುವ ಶ್ರೀ ಭಗವತಿ ದೇವಾಲಯ ಸಮುದ್ರ ತೀರಕ್ಕೆ ಸನಿಹದಲ್ಲಿದೆ.ಇಲ್ಲಿಗೆ ದೇವಿ ನಾವೆಯ ಮೂಲಕ ಬಂದರು ಎಂಬ ಪ್ರತೀತಿ ಇದೆ.

ಸಾಮನ್ಯವಾಗಿ ದೇವಾಲಯಗಳ ಪ್ರದಕ್ಷಿಣೆ ಪಥಗಳು ಕಲ್ಲು ಹಾಸಿನವಾಗಿರುತ್ತವೆ.ಆಧುನಿಕ ಕಾಲದಲ್ಲಿ ಟೈಲ್ ಹಾಸಿರುವ ಪ್ರದಕ್ಷಿಣಾ ಪಥಗಳೂ ಇವೆ. ಆದರೆ ಸಸಿಹಿತ್ಲು ದೇವಿಯ ಪ್ರದಕ್ಷಿಣಾ ಪಥ ಮರಳಿನದ್ದು. ಭಕ್ತರು ಮರಳು ಹಾಸಿನಲ್ಲಿಯೇ ದೇವಿಗೆ ಪ್ರದಕ್ಷಿಣೆ ಹಾಕುತ್ತಾರೆ. 

ಭಗವತಿಯು ಶ್ರೀ ವಿಷ್ಣುವಿನ ಕಣ್ಣೀರಿನಿಂದ ಉದಿಸಿದ ಸಪ್ತದುರ್ಗೆಯರಲ್ಲಿ ಒಬ್ಬರು ಎಂದು ಕಥೆ ಇದೆ. ಅದೇ ರೀತಿ ಶಿವನ ಹಣೆಗಣ್ಣಿನಿಂದ ಉದಿಸಿದರು ಎಂಬ ಪುರಾಣವೂ  ಇದೆ.

ಬಪ್ಪನಾಡಿನ ಶ್ರೀ ದುರ್ಗೆ ಮತ್ತು ಸಸಿಹಿತ್ಲು ಶ್ರೀ ಭಗವತಿ ಸಹೋದರಿಯರು ಎಂಬ ನಂಬಿಕೆ ಇದೆ.ಜಾತ್ರೆಯ ಸಂದರ್ಭದಲ್ಲಿ ಶ್ರೀ ಭಗವತಿ ಬಪ್ಪನಾಡು ಶ್ರೀ ದುರ್ಗೆಯ ಭೇಟಿಗೆ ಹೋಗುವ ಸಂಪ್ರದಾಯವಿದೆ.ಹದಿನಾಲ್ಕನೆಯ ಶತಮಾನದ  ನಂದನೇಶ್ವರ ದೇವಾಲಯದ ಶಾಸನದಲ್ಲಿ ಸಸಿಹಿತ್ಲು ಭಗವತಿಯ ಉಲ್ಲೇಖವಿದೆ. ಕಂಚಿಲು ಸೇವೆ, ಬೆಳಕು ಸೇವೆ ಮತ್ತು ಹೊಸಕ್ಕಿ ನಡಾವಳಿ ಇಲ್ಲಿಯ ವಿಶೇಷ.

ಭಗವತಿ ಆರಾಧನೆ ಕೇರಳದ ಕೊಡಂಗಲ್ಲೂರು ಭಾಗದಿಂದ  ಆರಂಭಗೊಳ್ಳುತ್ತದೆ ಎಂದೂ ಹೇಳಲಾಗುತ್ತದೆ. ಹಿಂದೆ ಸಮುದಾಯವೊಂದಕ್ಕೆ ಸೀಮಿತವಾಗಿದ್ದ ಭಗವತಿ ಇಂದು ಸರ್ವಸಮುದಾಯದ ಆರಾಧನೆಯನ್ನು ಪಡೆಯುತ್ತಿದ್ದಾರೆ.

ಸಸಿಹಿತ್ಲು ಶ್ರೀ ಭಗವತಿ ನವರಾತ್ರಿಯ ಒಂಭತ್ತು ದಿನಗಳಲ್ಲಿ ಮೂರು ರೂಪಗಳಲ್ಲಿ ಆರಾಧನೆ ಪಡೆಯುತ್ತಾರೆ. ಮೊದಲ ಮೂರು ದಿನ  ಮಹಾಕಾಳಿಯಾಗಿ, ಬಳಿಕ ಮೂರು ದಿನ ಮಹಾಲಕ್ಷ್ಮಿ ಯಾಗಿ ಆ ನಂತರದ ಮೂರು ದಿನ ಮಹಾಸರಸ್ವತಿಯಾಗಿ ಆರಾಧನೆ ಸ್ವೀಕರಿಸುತ್ತಾರೆ. ಮಹಾಶಕ್ತಿ ನೆಲೆಗೊಂಡ ಪ್ರಾಚೀನ ಗೋಳಿಮರ ಕಟ್ಟೆ ಇಲ್ಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article