ಸರಕಾರಿ ನೌಕರರ ನಗದುರಹಿತ ಚಿಕಿತ್ಸೆ: ಇನ್ನಷ್ಟು ಆಸ್ಪತ್ರೆಗಳ ಸೇರ್ಪಡೆ: ಜಿಲ್ಲಾಧಿಕಾರಿ

ಸರಕಾರಿ ನೌಕರರ ನಗದುರಹಿತ ಚಿಕಿತ್ಸೆ: ಇನ್ನಷ್ಟು ಆಸ್ಪತ್ರೆಗಳ ಸೇರ್ಪಡೆ: ಜಿಲ್ಲಾಧಿಕಾರಿ


ಮಂಗಳೂರು: ರಾಜ್ಯ ಸರಕಾರವು ಸರಕಾರಿ ಅಧಿಕಾರಿ ಮತ್ತು ನೌಕರರಿಗೆ ನಗದು ರಹಿತ ಚಿಕಿತ್ಸೆಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್) ಜಾರಿಗೆ ತಂದಿದ್ದು, ಇದರಿಂದ ನೌಕರರ ಚಿಕಿತ್ಸೆ ಸುಲಲಿತವಾಗಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.  

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೆ.ಎ.ಎಸ್.ಎಸ್ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಕುರಿತು  ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ತರಬೇತಿ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಜಿಲ್ಲೆಯ ಎಲ್ಲ ತಾಲೂಕು ಮತ್ತು ಮಂಗಳೂರು ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಕೆ.ಎ.ಎಸ್.ಎಸ್ ಯೋಜನೆಯಡಿ ನಗದು ರಹಿತವಾಗಿ ಚಿಕಿತ್ಸೆ ದೊರಕಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಉಪನಿರ್ದೇಶಕ ಡಾ. ಮಹೇಶ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 14 ಆಸ್ಪತ್ರೆಗಳು ಈ ಯೋಜನೆಯಡಿ ಸೇರ್ಪಡೆಯಾಗಿದೆ. ಇನ್ನಷ್ಟು ಆಸ್ಪತ್ರೆಗಳನ್ನು ಯೋಜನೆಯಡಿ ತರಲು ಪ್ರಯತ್ನಗಳಾಗುತ್ತಿವೆ. ಕೆ.ಎ.ಎಸ್.ಎಸ್ ಯೋಜನೆಯಲ್ಲಿ ಆಸ್ಪತ್ರೆಗಳಿಗೆ ಉತ್ತಮ ಪ್ಯಾಕೇಜ್ ದರವನ್ನು ನಿಗದಿಗೊಳಿಸಲಾಗಿದೆ. ಯೋಜನೆಯಡಿ ಆಸ್ಪತ್ರೆಗಳಿಗೆ ಶೇ.15 ರಷ್ಟು ಪ್ರೋತ್ಸಾಹಧನಕ್ಕೂ ಅವಕಾಶವಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರಿ ನೌಕರರು ಯಾವುದೇ ರೆಫರೆನ್ಸ್ ಇಲ್ಲದೆ ನಿಗದಿತ ಆಸ್ಪತ್ರೆಗಳಿಗೆ ನೇರವಾಗಿ ದಾಖಲಾಗಬಹುದು.  ಈ ಸಂದರ್ಭದಲ್ಲಿ ಕೆ.ಜಿ.ಐ.ಡಿ. ಸಂಖ್ಯೆ ಆಸ್ಪತ್ರೆಗಳಿಗೆ ನೀಡಬೇಕಿದೆ. ಸರಕಾರಿ ನೌಕರರ ಗ್ರೂಪ್ ಅನುಸಾರ ಚಿಕಿತ್ಸಾ ಪ್ಯಾಕೇಜ್ ನಿಗದಿಗೊಳಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 15 ದಿನಗಳೊಳಗೆ ಆಸ್ಪತ್ರೆಗಳು ಪಾವತಿಗೆ ಕ್ಲೇಮು ಸಲ್ಲಿಸಬೇಕು. 30 ದಿನಗಳೊಳಗೆ ಆಸ್ಪತ್ರೆಗೆ ಪಾವತಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ಅವಧಿಯನ್ನು ಇನ್ನಷ್ಟು ಕಡಿಮೆಗೊಳಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್ ಮಾತನಾಡಿ, ಸರಕಾರಿ ನೌಕರರು ಪ್ರತೀ ತಿಂಗಳು ತಮ್ಮ ವೇತನದಲ್ಲಿ ಕೆ.ಎ.ಎಸ್.ಎಸ್ ಯೋಜನೆಗೆ ನಿಗದಿತ ಮೊತ್ತವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ಪಾವತಿಸುತ್ತಿದ್ದಾರೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಇನ್ನಷ್ಟು ಖಾಸಗಿ ಆಸ್ಪತ್ರೆಗಳನ್ನು ಸೇರ್ಪಡೆ ಮಾಡಬೇಕು. ಸರಕಾರಿ ನೌಕರರ ಚಿಕಿತ್ಸಾ ವೆಚ್ಚವನ್ನು ಆಸ್ಪತ್ರೆಗಳಿಗೆ ತ್ವರಿತವಾಗಿ ಪಾವತಿ ದೊರಕಿಸಲು ಸಂಘವು ಮುತುವರ್ಜಿ ವಹಿಸಲಿದೆ ಎಂದು ಹೇಳಿದರು.

ಪಿಎಂ ರಾಹತ್ ಯೋಜನೆ

ಕಾರ್ಯಕ್ರಮದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಪಿಎಂ ರಾಹತ್ ಯೋಜನೆ ಕುರಿತು ಖಾಸಗಿ ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಯಿತು.

ಈ ಯೋಜನೆಯಡಿಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಮೊದಲ 7 ದಿನಗಳ ವರೆಗೆ ಕೇಂದ್ರ ಸರಕಾರದಿಂದ ರೂ.1.5 ಲಕ್ಷ ವರೆಗಿನ ಚಿಕಿತ್ಸೆ ಉಚಿತವಾಗಿ ದೊರಕಲಿದೆ. ಈ ಮೊತ್ತ ಸಾಕಾಗದಿದ್ದರೆ, ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ಮತ್ತೆ ರೂ. 1 ಲಕ್ಷ ದವರೆಗೆ ಚಿಕಿತ್ಸೆ ದೊರಕಲಿದೆ. ಒಟ್ಟಾರೆ ರೂ. 2.5 ಲಕ್ಷದವರೆಗೆ ಎಪಿಎಲ್/ಬಿಪಿಎಲ್ ಸೇರಿದಂತೆ ಎಲ್ಲರಿಗೂ ಚಿಕಿತ್ಸೆ ದೊರಕಲಿದೆ. ನಂತರ, ಆಯುಷ್ಮಾನ್ ಯೋಜನೆಗೂ ಇದನ್ನು ಜೋಡಣೆ ಮಾಡಬಹುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಉಪನಿರ್ದೇಶಕ ಡಾ. ಮಹೇಶ್ ತಿಳಿಸಿದರು. 

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ರಸ್ತೆ ಅಪಘಾತದಂತಹ ತುರ್ತು ಸಂಧರ್ಭಗಳಲ್ಲಿ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲದೆ, ತ್ವರಿತವಾಗಿ ಗಾಯಾಳುಗಳಿಗೆ ಚಿಕಿತ್ಸೆ ದೊರಕಬೇಕೆಂಬ ಉದ್ದೇಶದಿಂದ ಪಿಎಂ ರಾಹತ್ ಯೋಜನೆ ಜಾರಿಗೆ ಬಂದಿದೆ. ಆಸ್ಪತ್ರೆಗಳು ರೋಗಿಗಳನ್ನು ಅಪಾಯದಿಂದ ಪಾರು ಮಾಡಿ, ಅವರಿಗೆ ಉತ್ತಮ ಜೀವನ ದೊರಕಿಸಲು ಯೋಜನೆಯ ಲಾಭ ಪಡೆದು ರೋಗಿಗಳಿಗೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ವೆನ್‍ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಆಯುಷ್ಮಾನ್ ನೋಡಲ್ ಅಧಿಕಾರಿ ಡಾ. ಸುದರ್ಶನ್, ಕೆ.ಎ.ಎಸ್.ಎಸ್ ಯೋಜನೆ ಸಮನ್ವಯಾಧಿಕಾರಿ ಡಾ. ನೌಶಾದ್ ಬಾನು, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಲತೇಶ್, ಕೋಶಾಧಿಕಾರಿ ಸುರೇಶ್ ನಾಯ್ಕ್, ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article