ಬಿಜೆಪಿಗರು ಪ್ರತಿಯೊಬ್ಬರ ಮತ ಹಕ್ಕನ್ನು ಕಸಿದುಕೊಳ್ಳಲು ಹೊರಟಿದ್ದಾರೆ: ಯು.ಟಿ. ಫರ್ಝಾನ
ಮಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯ ಫಾರಂ ನಂಬರ್ 7ನ್ನು ದುರುಪಯೋಗಪಡಿಸುವ ಮೂಲಕ ಬಿಜೆಪಿಗರು ಪ್ರತಿಯೊಬ್ಬರ ಮತ ಹಕ್ಕನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ಅಂತಹವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಕೆಪಿಸಿಸಿ ರಾಜ್ಯ ವಕ್ತಾರೆ ಯು.ಟಿ. ಫರ್ಝಾನ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾರಂ ನಂಬರ್ 7 ದುರುಪಯೋಗ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದರೆ, ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗೀತು ಎಂಬ ಮಾಜಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಸರ್ಕಾರಕ್ಕೆ ಧಮ್ಕಿ ಹಾಕಿದಂತಿದೆ. ಈಗಾಗಲೇ ಬೆಳ್ತಂಗಡಿಯಲ್ಲಿ ಈ ರೀತಿ ಫಾರಂ ನಂಬರ್ 7 ದುರುಪಯೋಗ ಪಡಿಸಿದವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಅಲ್ಲಿನ ಮುಖಂಡ ರಕ್ಷಿತ್ ಶಿವರಾಮ್ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ರೀತಿ ದುರುಪಯೋಗಪಡಿಸಿದರೆ ಅಂತಹವರ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲು ಅವಕಾಶ ಇದೆ ಎಂದರು.
ಫಾರಂ ನಂಬರ್ 7ನಲ್ಲಿ ಅಂತಹ ವ್ಯಕ್ತಿಗಳು ಊರಿನಲ್ಲೇ ಇಲ್ಲ ಎಂದು ಸುಳ್ಳು ಮಾಹಿತಿಯನ್ನು ಆಯೋಗಕ್ಕೆ ಬಿಜೆಪಿಗರು ಸಲ್ಲಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ಬಳಿಕ ಪುನರ್ ಪರಿಶೀಲನೆಗೆ ಆಯೋಗ ಮುಂದಾಗಿದೆ. ಬಿಜೆಪಿಗರದು ಇದು ರಾಕ್ಷಸೀತನದಿಂದ ಕೂಡಿದ ದೇಶದ್ರೋಹಿ ಕೃತ್ಯವಾಗಿದೆ. ಅಂತಹವರ ವಿರುದ್ಧ ದೇಶವಿರೋಧಿ ಕೃತ್ಯದ ಮೊಕದ್ದಮೆ ದಾಖಲಿಸಬೇಕು. ಈ ಬಗ್ಗೆ ಬಿಜೆಪಿ ಜನತೆಗೆ ಸ್ಪಷ್ಟನೆ ನೀಡಬೇಕಿದ್ದು, ಚುನಾವಣಾ ಆಯೋಗವನ್ನು ಬಳಸಿ ಮತ ದರೋಡೆ ಮಾಡುತ್ತಿದೆ ಎಂದು ಫರ್ಝಾನಾ ಆರೋಪಿಸಿದರು.