ಸೌಜನ್ಯ ಪ್ರಕರಣ - ಎಸ್‌ಐಟಿಯಿಂದ ಶಶಿಕುಮಾರ್ ಬಿಡುಗಡೆ..?: ಸೌಜನ್ಯ, ಕುಸುಮಾವತಿ ಸಂಬಂಧ ತನಿಖೆಗೆ ದೂರು
ಮಂಗಳೂರು: ಉಜಿರೆ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆಗೆ ಸಂಬಂಧಿಸಿ ಎಸ್‌ಐಟಿಯ ಮುಖ್ಯಸ್ಥರಾಗಿ ನಿಯೋಜನೆಗೊಂಡು ತನಿಖೆ ಆರಂಭಿಸಿದ್ದ ಐಜಿಪಿ ಶಶಿಕುಮಾರ್ ಅವರು ವೈಯಕ್ತಿಕ ಕಾರಣಗಳ ಮೇರೆಗೆ ಎಸ್‌ಐಟಿಯಿಂದ ಬಿಡುಗಡೆಗೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಅಧಿಕೃತ ಆದೇಶ ಇನ್ನಷ್ಟೇ ಆಗಬೇಕಾಗಿದೆ.
ಎಸ್‌ಐಟಿಯಿಂದ ತನ್ನನ್ನು ಹೊರಗಿಡುವಂತೆ ಒತ್ತಾಯಿಸಿ ಶಶಿಕುಮಾರ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಎಸ್‌ಐಟಿಗೆ ನೂತನ ಮುಖ್ಯಸ್ಥರಾಗಿ ಲಾಬುರಾಮ್ ಅಥವಾ ಚೇತನ್ ಸಿಂಗ್ ರಾಥೋಡ್ ನೇಮಕವಾಗುವ ಸಾಧ್ಯತೆ ಇದೆ.
ಈಗಾಗಲೇ ಎಎಸ್ಪಿ ವೆಂಕಟೇಶ್ ಪ್ರಸನ್ನ ಅವರ ಬದಲಾವಣೆಯ ಬಗ್ಗೆಯೂ ಆದೇಶವಾಗುವ ಸಾಧ್ಯತೆ ಇದೆ. ಅವರ ಸ್ಥಾನಕ್ಕೆ ಎಸಿಪಿ ಶ್ರೀನಿಧಿ ನೇಮಕವಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸೌಜನ್ಯ, ಕುಸುಮಾವತಿ ಸಂಬಂಧ ತನಿಖೆಗೆ ದೂರು..
ಸೌಜನ್ಯ ಹಾಗೂ ಆಕೆಯ ತಾಯಿ ಕುಸುಮಾವತಿ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಸುವಂತೆ ಧರ್ಮಸ್ಥಳದ ಗ್ರಾಮಸ್ಥ ಕಿಶೋರ್ ಎಂಬವರು ಎಸ್‌ಐಟಿಗೆ ದೂರು ಸಲ್ಲಿಸಿದ್ದಾರೆ.
ಮಂಗಳೂರು ಎಸ್‌ಐಟಿ ಕಚೇರಿಗೆ ಆಗಮಿಸಿದ ಕಿಶೋರ್, ಹಲವು ಪುಟಗಳ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದು, ಕುಸುಮಾವತಿ ಅವರು ಸೌಜನ್ಯ ಅವರ ತಾಯಿಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
2015ರಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ಇಂದಿರಾವತಿ ಕೋಂ ಚಂದಪ್ಪ ಗೌಡರಿಗೆ ಜಾಗ ಮಂಜೂರಾಗಿದ್ದು, ಸದ್ಯ ಈ ಜಾಗ ಕುಸುಮಾವತಿ ಹೆಸರಿನಲ್ಲಿ ಸ್ವಾಧೀನದಲ್ಲಿರುವ ಬಗ್ಗೆ ದಾಖಲೆಗಳಿವೆ. ಆದರೆ, ಇಂದಿರಾವತಿ ಎಂಬ ಮಹಿಳೆ ಪಾಂಗಳ ಗ್ರಾಮದಲ್ಲಿ ವಾಸ್ತವ್ಯ ಹೊಂದಿಲ್ಲ ಎಂದು ಕಿಶೋರ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಎಸ್‌ಐಟಿ ರಚನೆಗೂ ಮೊದಲೇ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿರುವ ಕಿಶೋರ್, ಇಂದಿರಾವತಿ ಅವರ ಇರುವಿಕೆ ಹಾಗೂ ಮತ್ತೊಬ್ಬರ ಗುರುತಿನ ವಂಚನೆ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ಎಂದು ಕುಸುಮಾವತಿ ಸಲ್ಲಿಸಿರುವ ಪ್ರಮಾಣಪತ್ರ ಸುಳ್ಳು ಎಂದು ಆರೋಪಿಸಿರುವ ಅವರು, ಆಧಾರ್ ದಾಖಲೆ ಹಾಗೂ ಪಡಿತರ ಚೀಟಿ ದಾಖಲೆಗಳಲ್ಲಿ ವ್ಯತ್ಯಾಸಗಳಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೌಜನ್ಯ ಹಾಗೂ ಆಕೆಯ ಸಹೋದರಿ ಸೌಮ್ಯ ಕುಸುಮಾವತಿ ಅವರು ಹೆತ್ತ ಮಕ್ಕಳೇ ಎಂಬ ಬಗ್ಗೆ ಸಂಶಯ ವ್ಯಕ್ತಪಡಿಸಿ, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೋರಿದ್ದಾರೆ.
ತನಿಖೆಯ ವ್ಯಾಪ್ತಿ ಮೀರಿ ಹೋಗುವುದಿಲ್ಲ..
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಹಾಗೂ ಎಸ್‌ಐಟಿ ತಂಡದ ಹಿರಿಯ ಅಧಿಕಾರಿಯೂ ಆಗಿರುವ ಸುಧೀರ್ ಕುಮಾರ್ ರೆಡ್ಡಿ, ಕುಸುಮಾವತಿ ಅವರು ಸೌಜನ್ಯಳ ತಾಯಿಯೇ ಅಲ್ಲವೇ ಎಂಬಿತ್ಯಾದಿಯಾಗಿ ಕೆಲವರು ಪ್ರಶ್ನಿಸಿರುವ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ನಮಗೆ ಯಾವುದೇ ಅನುಮಾನಗಳಿಲ್ಲ. ತನಿಖೆಯ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ ಹಾಗೂ ಪ್ರಕರಣಕ್ಕೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ ತನಿಖೆ ನಡೆಸುವುದಿಲ್ಲ. ಸ್ಥಳೀಯ ವಿವಾದಗಳು ಏನಾದರೂ ಇದ್ದರೆ ಸಂಬಂಧಪಟ್ಟ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸುವರು ಎಂದವರು ಸ್ಪಷ್ಟಪಡಿಸಿದ್ದಾರೆ.