ಕೆಇಆರ್‌ಸಿ ಕರಡು ನಿಯಮಾವಳಿ ಕೈ ಬಿಡುವಂತೆ ಗುತ್ತಿಗೆದಾರರ ಒತ್ತಾಯ
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಅಧ್ಯಕ್ಷ ಪಿ. ರವಿಕುಮಾರ್ ಅಧ್ಯಕ್ಷತೆಯಲ್ಲಿ ಬಿಜೈಯ ಮೆಸ್ಕಾಂ ಕಚೇರಿಯಲ್ಲಿ ಬುಧವಾರ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನೂರಾರು ವಿದ್ಯುತ್ ಗುತ್ತಿಗೆದಾರ ಪ್ರತಿನಿಧಿಗಳು ಭಾಗವಹಿಸಿ ಗ್ರಾಹಕರ ಸ್ವಯಂ ಪ್ರಮಾಣೀಕರಣಕ್ಕೆ ತಮ್ಮ ಆತಂಕ, ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಿದರು.
ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರು ಸಲ್ಲಿಸುವ ಸಮಾಪನ ವರದಿಯನ್ನು (ಕಂಪ್ಲೀಷನ್ ರಿಪೋರ್ಟ್) ಸಲ್ಲಿಕೆಯ ವ್ಯವಸ್ಥೆ ರದ್ದುಗೊಳಿಸುವುದರಿಂದ ಸಾರ್ವಜನಿಕರ ವಿದ್ಯುತ್ ಸುರಕ್ಷತೆಗೆ ಧಕ್ಕೆಯಾಗುವುದಲ್ಲದೆ, ಈ ವೃತ್ತಿಯನ್ನು ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ ಎಂಬ ಆತಂಕ ಗುತ್ತಿಗೆದಾರ ಸಂಘಟನೆಗಳ ಪ್ರತಿನಿಧಿಗಳಿಂದ ವ್ಯಕ್ತವಾಯಿತು.
ವಿದ್ಯುತ್ ಗುತ್ತಿಗೆದಾರರು ವಿದ್ಯುತ್ ಸಂಪರ್ಕ ನೀಡುವ ಕುರಿತಂತೆ ಸಾಕಷ್ಟು ಅನುಭವವನ್ನು ಹೊಂದಿರುತ್ತಾರೆ. ಮಾತ್ರವಲ್ಲದೆ, ಅರ್ಥಿಂಗ್, ಆಂಪ್ಸ್, ವೋಲ್ಟ್ ಮತ್ತು ಇತರ ವಿದ್ಯುತ್ ಪೂರಕ ವ್ಯವಸ್ಥೆಗಳನ್ನು ಪರಿಶೀಲಿಸಲು ಅಗತ್ಯವಿರುವ ಉಪಕರಣಗಳನ್ನು ಹೊಂದಿದ್ದಾರೆ. ಆದರೆ ಸಾಮಾನ್ಯ ವ್ಯಕ್ತಿಗಳು ಸುರಕ್ಷತೆಯನ್ನು ಪ್ರಮಾಣೀಕರಿ ಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳಲು ಸಾಧ್ಯವಾಗದು. ಈ ಹೊಸ ನಿಬಂಧನೆಯು ರಾಜ್ಯದಲ್ಲಿ ಲಕ್ಷಾಂತರ ವಿದ್ಯುತ್ ಗುತ್ತಿಗೆದಾರರ ಉದ್ಯೋಗವನ್ನೂ ಕಸಿದುಕೊಳ್ಳುತ್ತದೆ ಎಂಬ ಆತಂಕ ವಿಚಾರಣೆಯ ವೇಳೆ ಗುತ್ತಿಗೆದಾರರಿಂದ ವ್ಯಕ್ತವಾಯಿತು.
ದಕ್ಷಿಣ ಕನ್ನಡ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕುಶಾಲ ಪೂಜಾರಿ ಮಾತನಾಡಿ, ಕರಡು ನಿಯಮಾ ವಳಿಯ 4.64ನೇ ಅಂಶದಲ್ಲಿ ಗ್ರಾಹಕರು ಸ್ವಯಂ ಘೋಷಣೆ ಸಲ್ಲಿಸುವ ಮೂಲಕ ವಿದ್ಯುತ್ ಸಂಪರ್ಕ ಪಡೆಯ ಬಹುದು ಎಂಬ ಪ್ರಸ್ತಾಪ ಮಾಡಲಾಗಿದೆ. ಕರ್ನಾಟಕದಲ್ಲಿ ಸುಮಾರು 30 ಸಾವಿರ ವಿದ್ಯುತ್ ಗುತ್ತಿಗೆದಾರರು ನೋಂದಣಿಯಾಗಿದ್ದು, ಅಷ್ಟೇ ಸಂಖ್ಯೆಯ ಕಾರ್ಮಿಕರು ಮತ್ತು ಮೇಲ್ವಿಚಾರಕರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿ ದ್ದಾರೆ. ಒಟ್ಟಾರೆಯಾಗಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಈ ಉದ್ಯೋಗವನ್ನು ಅವಲಂಬಿಸಿದ್ದಾರೆ. ಇವರೆಲ್ಲರೂ ಸ್ವಯಂ ಉದ್ಯೋಗದ ಮೂಲಕ ತಮ್ಮ ಕುಟುಂಬಗಳನ್ನು ನಿರ್ವಹಿಸುತ್ತಿದ್ದಾರೆ. ಈ ಕರಡು ನಿಯಮ ಜಾರಿಯಾದರೆ ಈ ಎಲ್ಲರ ಉದ್ಯೋಗಕ್ಕೆ ಕುತ್ತುಂಟಾಗಲಿದೆ ಎಂದರು.
ಗ್ರಾಹಕರ ಪರವಾಗಿ ಸತ್ಯನಾರಾಯಣ ಉಡುಪ, ವಿವಿಧ ಜಿಲ್ಲೆಗಳ ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರತಿನಿಧಿ ಗಳಾದ ಸೂರ್ಯನಾಥ್ ಆಳ್ವ, ರೆಹಮಾನ್ ಬೋಳಿಯಾರ್, ಸತೀಶ್ ಕೊಠಾರಿ, ಸುನಿಲ್ ವಾಸ್, ಬಾಲಕೃಷ್ಣ, ಅಲ್ಫೋನ್ಸೋ, ಕೆ. ಆಳ್ವ, ಲಕ್ಷ್ಮಣ್, ಅಬ್ದುಲ್ ಅಝೀಝ್, ಮೋಹನ್ ಸಾಲಿಯ್, ಕುಶಾಲ ಪೂಜಾರಿ, ಸಚಿನ್ ಪೂಜಾರಿ, ಪಿ. ವೆಂಕಟರಾವ್, ಕೃಷ್ಣ ಪ್ರಶಾಂತ್, ರಾಜೇಶ್ ಕೋಟ್ಯಾನ್, ಜಯಾನಂದ, ರವೀಂದ್ರ ಪೈ, ರಮೇಶ್, ಕೇಶವ, ಮೈರಪ್ಪ, ವಿನ್ಸೆಂಟ್, ರಾಧಾಕೃಷ್ಣ ಮೊದಲಾದವರು ತಮ್ಮ ಸಲಹೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಆಯೋಗದ ಸದಸ್ಯರಾದ ಎಚ್.ಕೆ. ಜಗದೀಶ್, ಜಾವೇದ್ ಅಖ್ತರ್ ಉಪಸ್ಥಿತರಿದ್ದರು.