ಜಾತಿ, ಮತ, ಧರ್ಮ ಭೇದವಿಲ್ಲದೆ ಸೇವೆ-ಮುಂದಿನ ದಿನಗಳಲ್ಲಿ ದೇವರ ಕೆಲಸಕ್ಕೆ ಆದ್ಯತೆ: ಡಾ. ಎಂ.ಎನ್. ರಾಜೇಂದ್ರ ಕುಮಾರ್

ಜಾತಿ, ಮತ, ಧರ್ಮ ಭೇದವಿಲ್ಲದೆ ಸೇವೆ-ಮುಂದಿನ ದಿನಗಳಲ್ಲಿ ದೇವರ ಕೆಲಸಕ್ಕೆ ಆದ್ಯತೆ: ಡಾ. ಎಂ.ಎನ್. ರಾಜೇಂದ್ರ ಕುಮಾರ್

ಡಾ. ಎಂ.ಎನ್.ಆರ್. ಸಮಾಜ ಮುಖಿ ಕಾರ್ಯಗಳಿಗೆ ಚಾಲನೆ


ಮಂಗಳೂರು: ಸಹಕಾರ ರಂಗದಲ್ಲಿ ಜಾತಿ-ಧರ್ಮದ ಭೇದವಿಲ್ಲದೆ ಸೇವೆ ಮುಂದುವರಿಸುತ್ತೇನೆ. ಮುಂದಿನ ದಿನಗಳಲ್ಲಿ ದೇವರ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ನಗರದ  ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯದ ಶುಭ ಹಾರೈಕೆಯೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳ ಉದ್ಘಾಟನೆ, ಅಶಕ್ತರಿಗೆ ನೆರವು ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ಭಗವಂತ, ಸ್ವಾಮೀಜಿಗಳ ಆಶೀರ್ವಾದ, ಹಿತೈಷಿಗಳು, ಹಿರಿಯರು, ಚಿಕಿತ್ಸೆ ನೀಡಿದ ವೈದ್ಯರು ಮತ್ತು ಎಲ್ಲರ ಪ್ರೀತಿ-ವಿಶ್ವಾಸದಿಂದ ತಾವು ಮತ್ತೆ ಗುಣಮುಖರಾಗಿ ನಿಮ್ಮೆಲ್ಲರ ಮುಂದೆ ಬಂದು ನಿಲ್ಲುವಂತಾಗಿದೆ. ಆಸ್ಪತ್ರೆಯಲ್ಲಿ ಇರುವಾಗ ದೇವರ ಪ್ರಸಾದ ತಂದು ನೀಡಿದ ಅರ್ಚಕರು, ಆತ್ಮೀಯರು ಕಾಳಜಿ ವಹಿಸಿದ್ದಾರೆ ಎಂದು ಕೃತಜ್ಞತೆ ಅರ್ಪಿಸಿದರು.

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ತುರ್ತಾಗಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚಿಸಿ ಉತ್ತಮ ಆರೋಗ್ಯ ಸೇವೆ ಸಿಗುವಂತೆ ನೋಡಿಕೊಂಡಿದ್ದನ್ನು ಅವರು ನೆನಪಿಸಿಕೊಂಡರು. ಎಲ್ಲರ ಪ್ರೀತಿ, ಆಶೀರ್ವಾದಿಂದ ಮತ್ತೆ ನಿಮ್ಮ ಜತೆ ಕೆಲಸ ಮಾಡುವಂತೆ ಆಗಿದೆ ಎಂದರು.

ದೇಣಿಗೆ..

ಮುಂದಕ್ಕೆ ದೇವರ ಕೆಲಸಗಳಿಗೆ ಆದ್ಯತೆ ನೀಡುತ್ತೇನೆ. ತಿರುಪತಿಗೆ 1 ಕೋಟಿ ರೂಪಾಯಿಗಳನ್ನು ಕಳುಹಿಸಲಾಗುವುದು. ಉಡುಪಿ ಮಠ ಹಾಗೂ ಜಿಲ್ಲೆಯ ಎಲ್ಲ ದೇವಸ್ಥಾನಗಳ ಕಾರ್ಯಗಳಿಗೂ ಉತ್ತಮ ರೀತಿಯಲ್ಲಿ ನೆರವು ನೀಡುವುದಾಗಿ ಘೋಷಿಸಿದರು.

ನವೋದಯ ಸಂಘ ಹಾಗೂ ಮಹಿಳೆಯರ ಕಲ್ಯಾಣ:

ನವೋದಯ ಸ್ವಸಹಾಯ ಸಂಘದ ಬಡ ಮಹಿಳೆಯರ ನೆರವಿಗಾಗಿ ಒಂದು ಕೋಟಿ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು. ಮುಂಬರುವ ಫೆಬ್ರವರಿ 18ರಿಂದ ನಡೆಯಲಿರುವ ಕಾರ್ಕಳ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೂ ಒಂದು ದಿನದ ಪೂಜೆ ಹಾಗೂ ವೈಯಕ್ತಿಕವಾಗಿ 50 ಲಕ್ಷ ರೂ. ನೀಡುವುದಾಗಿ ತಿಳಿಸಿದರು.  

ಸಹಕಾರಿ ರಂಗದಲ್ಲಿ ನಿಷ್ಪಕ್ಷಪಾತ ಸೇವೆ:

ಕಳೆದ 40-45 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಸಹಕಾರಿ ಕ್ಷೇತ್ರದಲ್ಲಿ ಯಾರೇ ಅನ್ಯಾಯಕ್ಕೊಳಗಾದರೂ ಅವರ ರಕ್ಷಣೆಗೆ ನಿಲ್ಲುವುದಾಗಿ ಭರವಸೆ ನೀಡಿದರು. ಯಾವುದೇ ಪಕ್ಷ, ಜಾತಿ ಅಥವಾ ಭೇದಭಾವವಿಲ್ಲದೆ ಕೇವಲ ‘ಸಹಕಾರ ಪಕ್ಷ’ ಎನ್ನುವ ದೃಷ್ಟಿಯಿಂದ ಸಮರ್ಪಕವಾಗಿ ಸೇವೆ ಸಲ್ಲಿಸುವುದಾಗಿ ಅವರು ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಯಾವುದೇ ಜಾತಿ, ಮತ ಹಾಗೂ ಕುಟುಂಬಕ್ಕೆ ಸೀಮಿತವಾಗದೆ ಎಲ್ಲರೊಂದಿಗೆ ಬೆರೆತು ಸಮಾಜಮುಖಿ ಕೆಲಸಗಳ ಮೂಲಕ ಸಾರ್ವಜನಿಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿ ನೂರ್ಕಾಲ ನಮ್ಮೆಲ್ಲರೊಂದಿಗೆ ಇರಲಿ ಹಾಗೂ ಅವರ ಆರೋಗ್ಯದ ಸುಧಾರಣೆ ಮತ್ತು ಸಮಾಜ ಸೇವೆಯು ದೀರ್ಘಕಾಲ ಮುಂದುವರಿಯಲಿ ಎಂದು ಹಾರೈಸಿದರು.

 ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಕೊಡುಗೆಯಾಗಿ ನೀಡಿದ ವಾಹನ ಕೇವಲ ಕಸದ ಗಾಡಿಯಲ್ಲ, ‘ಕಸದ ಗಾಡಿ’ ಎಂದು ಭಾವಿಸಬಾರದು. ಇದು ದೇವರಿಗೆ ಸಮರ್ಪಿಸಿದ ಹೂವಿನ ಪವಿತ್ರತೆಯನ್ನು ಕಾಪಾಡುವ ಮತ್ತು ಮರುಬಳಕೆ ಮಾಡುವ ಅತ್ಯಂತ ಆಳವಾದ ಭಾವನೆಯಿಂದ ರೂಪಿಸಿದ ವಿನೂತನ ಯೋಜನೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 800ಕ್ಕೂ ಅಧಿಕ ದೇವಸ್ಥಾನಗಳಿದ್ದು, ಭಕ್ತರು ದೇವರಿಗೆ ಅರ್ಪಿಸುವ ಹೂವುಗಳನ್ನು ಕಸದಂತೆ ಬಿಸಾಡದೆ, ಅವುಗಳ ಪವಿತ್ರತೆಯನ್ನು ಕಾಪಾಡಿಕೊಂಡು ಮರುಬಳಕೆ ಮಾಡುವ ಉದ್ದೇಶದಿಂದ ಈ ಯೋಜನೆಗೆ ರೂಪು ನೀಡಲಾಗಿದೆ ಎಂದರು.  

ಉಡುಪಿ ಸುಗಂಧ:

ದೇವಸ್ಥಾನಗಳ ನಿರ್ಮಾಲ್ಯ ಹೂವುಗಳಿಂದ ಅಗರಬತ್ತಿ, ಧೂಪ ಹಾಗೂ ರೂಮ್ ಫ್ರೆಶ್ನರ್‌ಗಳಂತಹ ವಿವಿಧ ಉತ್ಪನ್ನಗಳನ್ನು ತಯಾರಿಸುವ ‘ಉಡುಪಿ ಸುಗಂಧ’ ಪ್ರಾಜೆಕ್ಟ್ ಅನ್ನು ಜಿಲ್ಲಾಡಳಿತ, ಎನ್‌ಜಿಒ ಮತ್ತು ಚೇಂಬರ್ ಆಫ್ ಕಾಮರ್ಸ್ ಸಹಯೋಗದೊಂದಿಗೆ ಆರಂಭಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇದರ ಮೂರು ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.  

ಈ ಯೋಜನೆಯ ಮೂಲಸೌಕರ್ಯ ಮತ್ತು ಯಂತ್ರೋಪಕರಣಗಳ ವೆಚ್ಚದ ಕುರಿತು ಚರ್ಚಿಸಿದಾಗ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಫೋನ್ ಮಾಡಿದ ಕೇವಲ 10 ಸೆಕೆಂಡುಗಳಲ್ಲಿ ಸ್ಪಂದಿಸಿ, ಇಡೀ ಜಿಲ್ಲೆಯಲ್ಲಿ ಸಂಚರಿಸಿ ಹೂವುಗಳನ್ನು ಸಂಗ್ರಹಿಸಲು ಒಂದು ಸುಸಜ್ಜಿತ ವಾಹನವನ್ನು ಕೊಡಿಸಿಕೊಡುವುದಾಗಿ ಒಪ್ಪಿಕೊಂಡರು ಎಂದು ಪ್ರಶಂಸಿಸಿದರು.  

ಈ ಯೋಜನೆಯಡಿ ಸುಮಾರು 30 ಜನ ಹೆಣ್ಣುಮಕ್ಕಳಿಗೆ ಹೂವಿನಿಂದ ಉತ್ಪನ್ನಗಳನ್ನು ತಯಾರಿಸುವ ಕುರಿತು ವಿಶೇಷ ತರಬೇತಿ ನೀಡಲಾಗಿದೆ. ಈ ಸಾಮುದಾಯಿಕ ಉದ್ಯಮಕ್ಕೆ ಈಗ ಮಂಗಳೂರು ಸೇರಿದಂತೆ ವಿವಿಧ ಕಡೆಗಳಿಂದಲೂ ಉತ್ತಮ ಸ್ಪಂದನೆ ಹಾಗೂ ಬೇಡಿಕೆ ಬರುತ್ತಿದೆ ಎಂದು ತಿಳಿಸಿದರು.  

ಪೇಜಾವರ ಶ್ರೀಗಳು ಆಶೀರ್ವಚನ ನೀಡಿದರು. ಶಾಸಕ ಯಶ್‌ಪಾಲ್ ಸುವರ್ಣ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮಾತನಾಡಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜರಾಮ ಭಟ್, ಭಾಸ್ಕರ್ ಎಸ್.ಕೋಟ್ಯಾನ್, ಅಶೋಕ್ ಕುಮಾರ್ ಶೆಟ್ಟಿ, ಜೈರಾಜ್ ಬಿ.ರೈ, ಎಸ್.ಬಿ.ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಎಂ. ಮಹೇಶ್ ಹೆಗ್ಡೆ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಎಸ್.ಎನ್. ಮನ್ಮಥ , ಕುಶಾಲಪ್ಪ ಗೌಡ, ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೇಘರಾಜ್ ಜೈನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ   ಉಪಸ್ಥಿತರಿದ್ದರು.

ಬ್ಯಾಂಕ್ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ಶಶಿಕುಮಾರ್ ರೈ ಬಾಲ್ಯೋಟ್ಟು ವಂದಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ ಮಾಡಲಾಯಿತು. ನವೋದಯ ಸ್ವ ಸಹಾಯ ಸಂಘಗಳ ನಾಲ್ವರು ಸದಸ್ಯರಿಗೆ ತಲಾ ಒಂದು ಲಕ್ಷ ರೂ. ಮಾನವೀಯ ನೆರವು ನೀಡಲಾಯಿತು.

ದೇವಸ್ಥಾನಗಳ ಪ್ರಸಾದ, ಬೆಳ್ಳಿ ಗದೆ..

ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯದ ಶುಭ ಹಾರೈಕೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ, ಆಸ್ಪತ್ರೆಯಿಂದ ಗುಣಮುಖರಾಗಿ ಆಗಮಿಸಿದ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರಿಗೆ ಸುಬ್ರಹ್ಮಣ್ಯ, ಕೊಲ್ಲೂರು, ಶರವು ಸಹಿತ ವಿವಿಧ ದೇವಸ್ಥಾನಗಳ ಪ್ರಸಾದವನ್ನು ನೀಡಲಾಯಿತು. ಬೆಳ್ಳಿ ಗದೆ ನೀಡಿ ಅವರನ್ನು ಗೌರವಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article