ಪಡಿತರ ಚೀಟಿ ಫಲಾನುಭವಿಗಳಿಗೆ ತೀವ್ರ ತೊಂದರೆ: ಆಮ್ ಆದ್ಮಿ ಪಾರ್ಟಿ ಒತ್ತಾಯ
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ದಿನವಿಡೀ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿಯ ಸಾಲಿನಲ್ಲಿ ನಿಲ್ಲುವಂತಾಗಿದೆ. ಈ ಸಮಸ್ಯೆ ತಪ್ಪಿಸಲು ಪಂಜಾಬ್ ಮಾದರಿಯಲ್ಲಿ ರಾಜ್ಯದಲ್ಲೂ ಪಡಿತರ ಧಾನ್ಯಗಳನ್ನು ಮನೆ ಬಾಗಿಲಿಗೆ ವಿತರಣೆ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.
ತಾಂತ್ರಿಕ ದೋಷ, ಸರ್ವರ್ ಸಮಸ್ಯೆ, ಕಡ್ಡಾಯ ಇ ಕೆವೈಸಿ ನವೀಕರಣದ ವಿಳಂಬದಿಂದಾಗಿ ಪಡಿತರ ವಿತರಣೆ ಪದೇ ಪದೇ ಸ್ಥಗಿತಗೊಳ್ಳುತ್ತಿದೆ. ಇದರಿಂದಾಗಿ ಬಡ ಮತ್ತು ಕೂಲಿ ಕಾರ್ಮಿಕ ಕುಟುಂಬಗಳು ತಮ್ಮ ದಿನಗೂಲಿ ಕಳೆದುಕೊಂಡು ಪಡಿತರಕ್ಕಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆಪ್ ಆಡಳಿತದ ಪಂಜಾಬ್ನಲ್ಲಿ ಪಡಿತರವನ್ನು ಮನೆ ಮನೆಗೆ ನೀಡಲಾಗುತ್ತಿದೆ. ರಾಜ್ಯದಲ್ಲೂ ನ್ಯಾಯಬೆಲೆ ಅಂಗಡಿಗಳನ್ನು ಮುಚ್ಚಿ, ಪಡಿತರವನ್ನು ನೇರವಾಗಿ -ಲಾನುಭವಿಗಳ ಮನೆಗೇ ತಲುಪಿಸುವುದರಿಂದ ಸುದೀರ್ಘ ಸಾಲುಗಳನ್ನು ತಡೆಗಟ್ಟಬಹುದು, ಕಾರ್ಮಿಕರ ದಿನಗೂಲಿ ನಷ್ಟ ತಪ್ಪಿಸಬಹುದು, ಕಾಳಸಂತೆ ಮಾರಾಟ, ಅಕ್ರಮ ತಡೆಯಬಹುದು ಎಂದು ಆಪ್ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ವರ್ ಸಮಸ್ಯೆಗಳು ಮತ್ತು ಇ ಕೆವೈಸಿ ವಿಳಂಬವನ್ನು ತಕ್ಷಣವೇ ಸುಧಾರಿತ ಸಾ-ವೇರ್ ತಂತ್ರಜ್ಞಾನದ ಮೂಲಕ ಸರಿಪಡಿಸಬೇಕು, ಅರ್ಹ ಪ್ರತಿ ಕುಟುಂಬಕ್ಕೂ ಸಮರ್ಪಕವಾಗಿ ಪಡಿತರ ತಲುಪುವಂತೆ ಮಾಡಲು ಸರ್ಕಾರ ತಕ್ಷಣವೇ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಆಗ್ರಹಿಸಿದರು.
ರಾಜ್ಯದ ಕೆಎಸ್‌ಆರ್‌ಟಿಸಿ ಅಂತಾರಾಜ್ಯ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಶಕ್ತಿ ಯೋಜನೆ ಉಚಿತ ಪ್ರಯಾಣದ ಪ್ರಯೋಜನ ಸಿಗುತ್ತಿಲ್ಲ. ಕಾಸರಗೋಡು - ಮಂಗಳೂರು ನಡುವೆ ರಾಜ್ಯದ ಕೆಎಸ್‌ಆರ್ಟಿಸಿ ಬಸ್‌ಗಳಲ್ಲಿ ಸಂಚರಿಸುವ ಮಹಿಳೆಯರು ಶಕ್ತಿ ಯೋಜನೆಯಿಂದ ವಂಚಿತರಾಗಿದ್ದಾರೆ. ಆದರೆ, ಕೇರಳದ ಸರ್ಕಾರಿ ಬಸ್ಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ಕೇರಳದಂತೆ ರಾಜ್ಯದ ಎಲ್ಲ ಬಸ್ಗಳಲ್ಲೂ ಶಕ್ತಿ ಯೋಜನೆ ಅನ್ವಯ ಮಾಡಬೇಕು ಎಂದು ಆಪ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸೀಮಾ ಮಡಿವಾಳ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಆಪ್ ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ವಾಸುದೇವ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್.ಪಿಂಟೊ, ಜಿಲ್ಲಾ ಕಾರ್ಯದರ್ಶಿ ಕಬೀರ್ ಕಾಟಿಪಳ್ಳ, ಲೆಸ್ಲಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.