ಬೆಳೆ ವಿಮೆ ಮೊತ್ತ ಕಡಿತ: ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ-ಸರಿಯಾದ ಪರಿಹಾರ ದೊರೆಯದಿದ್ದರೆ ಬೀದಿಗಿಳಿದು ಹೋರಾಟ: ಹರೀಶ್ ಪೂಂಜ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ದೊರೆಯುತ್ತಿದ್ದ ಬೆಳೆ ವಿಮೆ ಮೊತ್ತವನ್ನು ನಿರಂತರವಾಗಿ ಕಡಿತಗೊಳಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಹೆಕ್ಟೇರ್‌ಗೆ ಸರಾಸರಿ ಕೇವಲ ರೂ.20 ಸಾವಿರಕ್ಕೆ ಇಳಿದಿದೆ ಎಂದು ಬಿಜೆಪಿ ಆರೋಪಿಸಿದೆ.
ಶನಿವಾರ ಮಂಗಳೂರಿನಲ್ಲಿರುವ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠೊಯಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು, ರೈತರಿಗೆ ಆರ್ಥಿಕ ಭದ್ರತೆ ಒದಗಿಸಬೇಕಾದ ಬೆಳೆ ವಿಮೆ ಯೋಜನೆಯೇ ರೈತರಿಗೆ ನಿರಾಶೆ ಉಂಟುಮಾಡುವಂತಾಗಿದೆ. ರಾಜ್ಯ ಸರ್ಕಾರವೇ ಇದಕ್ಕೆ ನೇರ ಕಾರಣ ಎಂದು ಆರೋಪಿಸಿದರು.
ವಿಮಾ ಕಂಪೆನಿಗೆ ರಾಜ್ಯ ಸರ್ಕಾರದ ಪಾಲು ಸರಿಯಾಗಿ ಪಾವತಿಸದೆ ಈ ಸಮಸ್ಯೆ ಎದುರಾಗಿದೆ. ಕೇಂದ್ರ ತನ್ನ ಪಾಲನ್ನು ನೀಡಿದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2013ರಿಂದ 2023ರವರೆಗೆ ಜಿಲ್ಲೆಯಲ್ಲಿ ಬೆಳೆ ವಿಮೆ ರೈತರಿಗೆ ಆಶಾದಾಯಕವಾಗಿತ್ತು. 2013ರ ಅವಧಿಯಲ್ಲಿ ಅಡಿಕೆ ಬೆಳೆಗಾರರಿಗೆ ಹೆಕ್ಟೇರ್‌ಗೆ ಸರಾಸರಿ ಸುಮಾರು ರೂ.1.28 ಲಕ್ಷದಷ್ಟು ವಿಮೆ ದೊರೆಯುತ್ತಿತ್ತು. ಬಳಿಕದ ವರ್ಷಗಳಲ್ಲಿ ಈ ಮೊತ್ತ ರೂ.60 ಸಾವಿರದಿಂದ ರೂ.90 ಸಾವಿರದವರೆಗೆ ಇತ್ತು. 2022–23ರ ಅವಧಿಯಲ್ಲಿ ಸುಮಾರು ರೂ.70 ಸಾವಿರದಷ್ಟಿದ್ದ ವಿಮೆ ಮೊತ್ತವು ನಂತರದ ವರ್ಷಗಳಲ್ಲಿ ಇಳಿಕೆಯಾಗುತ್ತಾ, 2024–25ರಲ್ಲಿ ಸುಮಾರು ರೂ.45 ಸಾವಿರದಿಂದ ರೂ.50 ಸಾವಿರಕ್ಕೆ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಇದು ಸರಾಸರಿ ರೂ.20 ಸಾವಿರಕ್ಕೆ ಕುಸಿದಿದೆ ಎಂದು ಅವರು ವಿವರಿಸಿದರು.
ಟೆಂಡರ್ ಪ್ರಕ್ರಿಯೆ ಪ್ರಶ್ನೆ:
2013ರಿಂದ ಆರಂಭಗೊಂಡ ಬೆಳೆ ವಿಮೆ ಯೋಜನೆಯಲ್ಲಿ ಮೊದಲ ಅವಧಿಯಲ್ಲಿ ಎಸ್‌ಬಿಐ ಜನರಲ್ ಇನ್ಸುರೆನ್ಸ್ ಹಾಗೂ ನಂತರ 2019ರಿಂದ 2023ರವರೆಗೆ ಓರಿಯಂಟಲ್ ಇನ್ಸುರೆನ್ಸ್ ಸಂಸ್ಥೆಗಳು ಕಾರ್ಯನಿರ್ವಹಿಸಿದ್ದವು. 2023ರಿಂದ ಟಾಟಾ ಎಐಜಿ ಸಂಸ್ಥೆ ಜಿಲ್ಲೆಯ ಬೆಳೆ ವಿಮೆ ಟೆಂಡರ್ ಪಡೆದಿದೆ ಎಂದು ಹರೀಶ್ ಪೂಂಜ ತಿಳಿಸಿದರು.
ಮೂರು ವರ್ಷಗಳ ಅವಧಿಗೆ ಟೆಂಡರ್ ಪಡೆದಿದ್ದ ಟಾಟಾ ಎಐಜಿ ಸಂಸ್ಥೆಗೆ 2026–27ನೇ ಸಾಲಿನಲ್ಲೂ ಹೊಸ ಟೆಂಡರ್ ಕರೆಯದೆ ಒಂದು ವರ್ಷ ಮುಂದುವರಿಸಿರುವುದು ಏಕೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಹರೀಶ್ ಪೂಂಜ ಸರ್ಕಾರ ತಕ್ಷಣ ರೈತರ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹೊಸ ಟೆಂಡರ್ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ ಹಾಗೂ ರೈತರ ನೋಂದಣಿ ಪ್ರಕ್ರಿಯೆಯನ್ನು ಜೂನ್ 30ರಿಂದ ಜುಲೈ 31ರೊಳಗೆ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ, ರೈತರ ಹಿತದೃಷ್ಟಿಯಿಂದ ಹಿಂದಿನ ವಿಮಾ ಸಂಸ್ಥೆಯನ್ನು ಒಂದು ವರ್ಷ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ವಿಮೆ ಮೊತ್ತ ಇಳಿಕೆಯಾಗುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರದ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಅಧಿವೇಶನದಲ್ಲಿ ಪ್ರಶ್ನಿಸಿದ್ದರೂ ಕ್ರಮವಿಲ್ಲ:
ಜಿಲ್ಲೆಯ ರೈತರಿಗೆ ಕಳೆದ ಬಾರಿ ಕಡಿಮೆ ಪ್ರಮಾಣದ ಬೆಳೆ ವಿಮೆ ದೊರೆತ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಈ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಲಾಗಿತ್ತು. ಆಗ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಜಿಲ್ಲೆಯ ಜನಪ್ರತಿನಿಧಿಗಳು, ವಿಮಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಿ ಸಮಸ್ಯೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಆದರೆ, ನಂತರ ಅಂತಹ ಸಭೆ ನಡೆದಿಲ್ಲ ಹಾಗೂ ವಿಮೆ ಮೊತ್ತ ಕಡಿಮೆಯಾಗಲು ಕಾರಣವೇನು ಎಂಬುದನ್ನು ರೈತರಿಗೆ ಅಥವಾ ಜಿಲ್ಲೆಯ ಜನಪ್ರತಿನಿಧಿಗಳಿಗೆ ಸರ್ಕಾರ ತಿಳಿಸಿಲ್ಲ ಎಂದು ಆರೋಪಿಸಿದರು.
ಸಚಿವ ಖಾದರ್‌ಗೆ ಪ್ರಶ್ನೆ:
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಬೆಳೆ ವಿಮೆ ಮೊತ್ತ ಕಡಿಮೆಯಾಗಿರುವ ವಿಚಾರದಲ್ಲಿ ಸ್ಪಷ್ಟ ಉತ್ತರ ನೀಡಬೇಕು. 2013ರಿಂದ 2023ರವರೆಗೆ ರೈತರಿಗೆ ದೊರೆತ ವಿಮೆ ಮೊತ್ತ ಹಾಗೂ ಪ್ರಸಕ್ತ ಸಾಲಿನಲ್ಲಿ ದೊರೆಯುತ್ತಿರುವ ಮೊತ್ತದ ನಡುವೆ ಇಷ್ಟೊಂದು ವ್ಯತ್ಯಾಸ ಉಂಟಾಗಲು ಕಾರಣವೇನು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪುಷ್ಪಾ ಮೇದಪ್ಪ, ಶೋಭೇಂದ್ರ, ಯತೀಶ್ ಆರ್ವರ್, ಉಮೇಶ್ ಬೆಳ್ತಂಗಡಿ, ಶಶಿಧರ ಕಲ್ಮಂಜ, ವಸಂತ ಪೂಜಾರಿ, ರಾಕೇಶ್ ರೈ ಸುಳ್ಯ, ಜಗನ್ನಾಥ್ ಮತ್ತಿತರರು ಉಪಸ್ಥಿರಿದ್ದರು.