ಒಂದು ದಿನಕ್ಕೆ ಸೀಮಿತವಾದ ಮಳೆ
ಮಂಗಳೂರು: ಭಾನುವಾರ ರಾತ್ರಿ ಹಾಗೂ ಸೋಮವಾರ ಕರಾವಳಿಯಾದ್ಯಂತ ಮಳೆಯಾಗಿದ್ದು, ಮಂಗಳವಾರ ಮಳೆ ಕ್ಷೀಣಗೊಂಡು ವಾತಾವರಣ ಬಿಸಿಯೇರಿದೆ.
ಬುಧವಾರ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದೊಂದಿಗೆ ಸಂಜೆ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಉತ್ತರ ಭಾರತದ ಕಡೆಯಿಂದ ಶುಶ್ಕ ಗಾಳಿ ಬೀಸುತ್ತಿರುವುದರಿಂದ ಮಳೆಯ ಸಾಧ್ಯತೆಗಳು ಕಡಿಮೆಯಾಗಿದೆ. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅ.9ರಿಂದ ಬಿಸಿಲಿನ ವಾತಾವರಣ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಿಸಿ ಏರಿದ ವಾತಾವರಣ
ಸೋಮವಾರ ತಂಪಾಗಿದ್ದ ಕರಾವಳಿ ವಾತಾವರಣ ಮಂಗಳವಾರ ವಾತಾವರಣದಲ್ಲಿ ಬಿಸಿ ಏರಿಕೆಯಾಗಿದೆ. ದ.ಕ ಜಿಲ್ಲೆಯಲ್ಲಿ ಗರಿಷ್ಠ 32.1ಡಿ.ಸೆ, ಕನಿಷ್ಠ 23.7ಡಿ.ಸೆ ಉಷ್ಣಾಂಶ ದಾಖಲಾಗಿದೆ. ಸೋಮವಾರ ಸುರಿದ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ನದಿ (ಬಂಟ್ವಾಳ), ನೇತ್ರಾವತಿ ನದಿ (ಉಪ್ಪಿನಂಗಡಿ), ಕುಮಾರಧಾರ ನದಿ (ಪುಲಿಕ್ಕುಕ್ಕು), ಗುರುಪುರ ನದಿ (ಅಡ್ಡೂರು) ಡ್ಯಾಂ ಪ್ರದೇಶದಲ್ಲಿ ನೀರಿನ ಮಟ್ಟ ತುಸು ಏರಿದೆ. ಗಾಳಿಯ ಚಲನೆಯು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ಸುಳ್ಯ, ಸಂಪಾಜೆ ಘಾಟಿಯ ಕೆಳಗಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.