ಕೊಂಕಣಿ ಸಮುದಾಯದ ಅನುವಂಶಿಕ ಮಾತೃ ಮೂಲ: ಜೀನೋಮಿಕ್ ಅಧ್ಯಯನ

ಕೊಂಕಣಿ ಸಮುದಾಯದ ಅನುವಂಶಿಕ ಮಾತೃ ಮೂಲ: ಜೀನೋಮಿಕ್ ಅಧ್ಯಯನ


ಮಂಗಳೂರು: ಭಾರತದ ಪಶ್ಚಿಮ ಕರಾವಳಿಯ ಕೊಂಕಣ ಪ್ರದೇಶವು ಸಂಸ್ಕೃತಿ, ಜಾನಪದ ಮತ್ತು ಜನಾಂಗೀಯ-ಭಾಷಿಕ ವೈವಿಧ್ಯತೆಯ ಕೇಂದ್ರವಾಗಿದೆ. ಇದು ಉತ್ತರದಲ್ಲಿ ದಮನ್‌ನಿಂದ ಹಿಡಿದು ದಕ್ಷಿಣದಲ್ಲಿ ಗಂಗಾವಳಿ ನದಿ ಮತ್ತು ಕಾರವಾರದವರೆಗೆ ವಿಸ್ತರಿಸಿದೆ. ದಕ್ಷಿಣದ ಕೊಚ್ಚಿ ವರೆಗೆ ಕೊಂಕಣಿ ಭಾಷಿಗರಿದ್ದಾರೆ. 

ಈ ಕಿರಿದಾದ ಭೂಭಾಗದ ಉದ್ದಕ್ಕೂ ಕೊಂಕಣಿ ಭಾಷೆಯನ್ನು ಮಾತನಾಡಲಾಗುತ್ತದೆ, ಉಚ್ಚಾರಣೆ, ವ್ಯಾಕರಣ ಮತ್ತು ಶಬ್ದಕೋಶದಲ್ಲಿ ಗಮನಾರ್ಹವಾದ ಸ್ಥಳೀಯ ವ್ಯತ್ಯಾಸಗಳಿವೆ. ಈ ಪ್ರದೇಶದಲ್ಲಿ ವಿವಿಧ ಸಾಮಾಜಿಕ, ವಲಸೆ ಮತ್ತು ಧಾರ್ಮಿಕ ಸಮೂಹಗಳು ವಾಸಿಸುತ್ತಿವೆ. ಆದಾಗ್ಯೂ, ಈ ಪ್ರದೇಶದ ಜನರ ಜೀನ್‌ಗಳ ಸಂರಚನೆ ಸಾಕಷ್ಟು ಅಧ್ಯಯನಕ್ಕೊಳಗಾಗಿಲ್ಲ.

ಹೈದರಾಬಾದ್‌ನ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲರ್ ಬಯಾಲಜಿಯ ಡಾ. ಕೆ. ತಂಗರಾಜ್ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಎಂ.ಎಸ್. ಮುಶ್ತಾಕ್ ಅವರ ನೇತೃತ್ವದ ಇತ್ತೀಚಿನ ಅಧ್ಯಯನವು ಕೊಂಕಣಿ ಮಾತನಾಡುವ ಜನರ ಸಂಕೀರ್ಣ ಮಾತೃಜೀವಕೋಶ ಆನುವಂಶಿಕತೆಯನ್ನು ಬೆಳಗಿಗೆ ತಂದಿದೆ. ಈ ಅಧ್ಯಯನವು ’ಊeಡಿeಜiಣಥಿ’ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಕೊಂಕಣಿ ಜನಸಮೂಹವನ್ನು ಅವರ ಮೌಖಿಕ ಇತಿಹಾಸದ ಆಧಾರದ ಮೇಲೆ, ‘ಸಾರಸ್ವತ’ ಮತ್ತು ‘ಸಾರಸ್ವತೇತರ’ ಗುಂಪುಗಳಾಗಿ ವಿಶಾಲವಾಗಿ ವಿಂಗಡಿಸಬಹುದು (ಅವರ ಮೂಲವು ಸರಸ್ವತಿ ನದಿಯ ದಂಡೆಯಲ್ಲಿದೆಯೇ ಎಂಬುದರ ಆಧಾರದ ಮೇಲೆ). ಈ ಅಧ್ಯಯನದಲ್ಲಿ, ಸಂಶೋಧಕರು ಕೊಂಕಣಿ ಸಮುದಾಯದ ಮಾತೃ ಮೂಲವನ್ನು ಕಂಡುಹಿಡಿಯಲು 295 ಕೊಂಕಣಿಗರ ಮಾತೃವಂಶದಿಂದ ಬಳುವಳಿಯಾಗಿ ಬಂದ ಮೈಟೊಕಾಂಡ್ರಿಯಲ್ ಡಿಎನ್‌ಎಯನ್ನು ವಿಶ್ಲೇಷಿಸಿದ್ದಾರೆ. ಒಟ್ಟಾರೆ ಮಾತೃ ಆನುವಂಶಿಕತೆಯು ಸ್ಥಳೀಯ ಮೂಲದ್ದಾಗಿದ್ದರೂ, ಸಾರಸ್ವತೇತರ ಗುಂಪುಗಳಿಗೆ ಹೋಲಿಸಿದರೆ ಸಾರಸ್ವತ ಗುಂಪುಗಳು ಪಶ್ಚಿಮ ಯುರೇಷಿಯನ್ ಮತ್ತು ಸ್ಟೆಪ್ಪಿ-ಸಂಬಂಧಿತ ವಂಶಾವಳಿಗಳೊಂದಿಗೆ ಸ್ವಲ್ಪ ಹೆಚ್ಚಿನ ಸಾಮೀಪ್ಯವನ್ನು ಪ್ರದರ್ಶಿಸುತ್ತವೆ ಎಂದು ಅವರು ಕಂಡುಕೊಂಡಿದ್ದಾರೆ. ಪ್ರಾಚೀನ ವಂಶಾವಳಿಗಳೊಂದಿಗೆ ಇದನ್ನು ನೋಡಿದಾಗ, ದಕ್ಷಿಣ ಏಷ್ಯಾಕ್ಕೆ ಕಂಚಿನ ಯುಗದ ವಲಸೆಗಳು ಕೇವಲ ಪುರುಷ-ಆಧಾರಿತವಾಗಿರಲಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಈ ಅಧ್ಯಯನದ ಪ್ರಮುಖ ಲೇಖಕ ಡಾ. ಜೈಸನ್ ಸಿಕ್ವೇರಾ, ಕೊಂಕಣಿ ಸಮುದಾಯಗಳ ಬಹು-ಪದರದ ಆನುವಂಶಿಕತೆಯನ್ನು ಒತ್ತಿಹೇಳಿದ್ದಾರೆ. ‘ಸಂಪೂರ್ಣ ಮೈಟೊಕಾಂಡ್ರಿಯಲ್ ಜೀನೋಮ್‌ಗಳನ್ನು ಪರೀಕ್ಷಿಸುವ ಮೂಲಕ, ಕೊಂಕಣಿ ಸಮುದಾಯಗಳನ್ನು ಒಗ್ಗೂಡಿಸುವ ಮತ್ತು ಪ್ರತ್ಯೇಕಿಸುವ ಶ್ರೀಮಂತ ಆನುವಂಶಿಕತೆಯನ್ನು ನಾವು ಅನಾವರಣಗೊಳಿಸಿದ್ದೇವೆ. ಇದು ಸಾವಿರಾರು ವರ್ಷಗಳಿಂದ ಭೂಗೋಳ, ಹವಾಮಾನ ಮತ್ತು ಸಂಸ್ಕೃತಿಯಿಂದ ರೂಪುಗೊಂಡಿದೆ’ ಎಂದು ಹೇಳಿದರು.

ಸಂಶೋಧಕರು ಕೊಂಕಣಿ ಸಮುದಾಯದ ಜೀನ್ ಮಾದರಿಯನ್ನು ಯುರೇಷಿಯಾದ 5,000 ಕ್ಕೂ ಹೆಚ್ಚು ಮಾದರಿಗಳೊಂದಿಗೆ ಹೋಲಿಸಿದ್ದಾರೆ. ಕೊಂಕಣಿ ಮಾತೃ ಜೀನ್ ಪೂಲ್ ಆಳವಾದ ದಕ್ಷಿಣ ಏಷ್ಯನ್ ಮತ್ತು ಪಶ್ಚಿಮ ಯುರೇಷಿಯನ್ ವಂಶಾವಳಿಗಳಿಂದ ರೂಪುಗೊಂಡಿದೆ ಎಂಬುದನ್ನು ಈ ವಿಶ್ಲೇಷಣೆಯು ಮತ್ತೊಮ್ಮೆ ದೃಢಪಡಿಸಿದೆ.

ಮಾತೃ ವೈವಿಧ್ಯತೆಯ ಪ್ರಮುಖ ಭಾಗವು ಪ್ರಾಚೀನ ಮೂಲದಿಂದ ಬಂದ ವಂಶಾವಳಿಗಳಿಂದ ಬಂದಿದೆ, ಇದು ಬಹುಶಃ ‘ಲಾಸ್ಟ್ ಗ್ಲೇಸಿಯಲ್ ಮ್ಯಾಕ್ಸಿಮಮ್’ (26,500 ರಿಂದ 19,000 ವರ್ಷಗಳ ಹಿಂದೆ) ಸಮಯದಲ್ಲಿ ನಿಯರ್ ಈಸ್ಟ್ ಪ್ರದೇಶದಲ್ಲಿ ಹುಟ್ಟಿಕೊಂಡಿರಬಹುದು. ಈ ವಂಶಾವಳಿಗಳು ಲಾಸ್ಟ್ ಗ್ಲೇಸಿಯಲ್ ಮ್ಯಾಕ್ಸಿಮಮ್ ನಂತರದ ಚೇತರಿಕೆಯ ಹಂತ (~19,000 ವರ್ಷಗಳ ಹಿಂದೆ) ಮತ್ತು ಹೋಲೋಸೀನ್ (9,700 ವರ್ಷಗಳ ಹಿಂದೆ) ಚಲನೆಗಳಿಂದಾಗಿ ಒಗ್ಗೂಡಿದವು ಎಂದು ಪ್ರೊ. ಮುಶ್ತಾಕ್ ಹೇಳಿದರು.

‘ಅನುವಂಷಿಕ ವೈವಿಧ್ಯತೆಗೆ ಹೆಸರಾದ ದಕ್ಷಿಣ ಏಷ್ಯಾದ ಜನರ ಇತಿಹಾಸದ ಗ್ರಹಿಕೆಯಲ್ಲಿನ ಪ್ರಮುಖ ಅಂತರವನ್ನು ನಮ್ಮ ಅಧ್ಯಯನವು ತುಂಬುತ್ತದೆ. ಸಾರಸ್ವತ ಗುಂಪುಗಳಲ್ಲಿ ಪಶ್ಚಿಮ ಯುರೇಷಿಯನ್ ಮತ್ತು ಸ್ಟೆಪ್ಪಿ-ಸಂಬಂಧಿತ ಮಾತೃ ವಂಶಾವಳಿಗಳ ಉಪಸ್ಥಿತಿಯು, ಪ್ರಾಚೀನ ವಲಸೆಗಳು ಮಾತೃ ಮತ್ತು ಪಿತೃ ಇಬ್ಬರ ಕೊಡುಗೆಗಳನ್ನೂ ಒಳಗೊಂಡ ಸಂಕೀರ್ಣ, ಬಹುಮುಖಿ ಘಟನೆಗಳಾಗಿದ್ದವು ಎಂಬುದನ್ನು ತೋರಿಸುತ್ತದೆ’ ಎಂದು ಡಾ. ತಂಗರಾಜ್ ಹೇಳಿದರು.

ಭಾರತದ ಪಶ್ಚಿಮ ಕರಾವಳಿಯ ಜನಾಂಗೀಯ-ಭಾಷಿಕ ಇತಿಹಾಸವನ್ನು ದಾಖಲಿಸುವಲ್ಲಿ ಕೊಂಕಣಿ ಸಮುದಾಯದ ಆನುವಂಶಿಕ ಚಿತ್ರಣವು ಒಂದು ಪ್ರಮುಖ ಕೊಂಡಿಯಾಗಿದೆ ಎಂದು CSIR-CCMB ಯ ನಿರ್ದೇಶಕ ಡಾ. ವಿನಯ್ ಕುಮಾರ್ ನಂದಿಕೂರಿ ಹೇಳಿದರು.

ಬರ್ನ್ ವಿಶ್ವವಿದ್ಯಾಲಯದ ಭಾಷಾವಿಜ್ಞಾನಿ ಪ್ರೊ. ಜಾರ್ಜ್ ವ್ಯಾನ್ ಡ್ರೀಮ್ ಮತ್ತು ಲಕ್ನೋದ BSIP ಯ ಡಾ. ಲೊಮಸ್ ಕುಮಾರ್ ಈ ಅಧ್ಯಯನದ ಇತರ ಲೇಖಕರಾಗಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ವಿಶ್ವವಿದ್ಯಾಲಯವು ಸ್ಥಳೀಯ ಸಮುದಾಯಗಳ ಜೀನ್‌ಶಾಸ್ತ್ರ ಸಂಶೋಧನೆಗೆ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಈ ಅಧ್ಯಯನಕ್ಕೆ ಕೊಂಕಣಿ ಅಧ್ಯಯನ ಪೀಠವು ಬೆಂಬಲ ನೀಡಿದೆ ಎಂದು ಹೇಳಿದರು.

ಕುಲಸಚಿವರು ಮಾತನಾಡಿ, ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗವು ಕಳೆದ ಕೆಲವು ವರ್ಷಗಳಿಂದ ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ನಮ್ಮ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಮ್ಮ ಸಂಸ್ಥೆಗೆ ಕೀರ್ತಿ ತರುತ್ತಿರುವುದು ನಮಗೆ ಸಂತೋಷ ತಂದಿದೆ ಎಂದು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article