ನಂದಿಗುಡ್ಡ ಸ್ಮಶಾನ: ವಿದ್ಯುತ್ ಚಾಲಿತ ಶವಾಗಾರಕ್ಕೆ ಆಗ್ರಹ
ಮಂಗಳೂರು: ನಗರದ ನಂದಿಗುಡ್ಡ ಸ್ಮಶಾನದಲ್ಲಿ ಅತೀ ಅಗತ್ಯವಿರುವ ವಿದ್ಯುತ್ ಚಾಲಿತ ಶವಾಗಾರದ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಗಿದ್ದು, ಶೀಘ್ರ ಕಾಮಗಾರಿ ಆರಂಭಿಸಬೇಕು ಎಂದು ಮಾಜಿ ಕಾರ್ಪೊರೇಟರ್ ಕೆ. ಭಾಸ್ಕರ ರಾವ್ ಆಗ್ರಹಿಸಿದ್ದಾರೆ.
ಶುಕ್ರವಾರ ನಗರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಿಗೆ ಅಭಾವ, ವಿಪರೀತ ಬೆಲೆ ಏರಿಕೆಯಿಂದ ಶವ ಸಂಸ್ಕಾರವೂ ಬಡ ಜನರ ಪಾಲಿಗೆ ತ್ರಾಸದಾಯಕವಾಗಿದೆ. ಪ್ರಸ್ತುತ ಸುಮಾರು 5 ಸಾವಿರ ರೂ. ವ್ಯಯಿಸಬೇಕಾಗಿದ್ದು, ಶೀಘ್ರ ವಿದ್ಯುತ್ ಚಾಲಿತ ಶವಾಗಾರದಿಂದ ಈ ವೆಚ್ಚ ಕಡಿಮೆಯಾಗಲಿದೆ. ಹಾಗಾಗಿ ಶೀಘ್ರ ಕಾಮಗಾರಿ ಆರಂಭಿಸಬೇಕು ಎಂದರು. ವಿದ್ಯುತ್ ಚಾಲಿತ ಶವಾಗಾರ ನಿರ್ಮಾಣಕ್ಕೆ ಮುಂದಾಗಿರುವ ಸರಕಾರ ನಡೆಯನ್ನು ಶ್ಲಾಘಿಸುವುದಾಗಿ ಅವರು ತಿಳಿಸಿದರು.
ಮಂಗಳಾದೇವಿ, ಮೋರ್ಗನ್ಸ್ ಗೇಟ್, ಕಂಕನಾಡಿ, ಎ.ಜೆ. ಆಸ್ಪತ್ರೆಯಾಗಿ ದೇರೆಬೈಲಿನ ಬಸ್ಸು ಸೌಲಭ್ಯ ಕಲ್ಪಿಸಬೇಕು. ಅದೇ ರೀತಿ ಮಂಗಳಾದೇವಿ, ಮೋರ್ಗನ್ಸ್ ಗೇಟ್, ಕಂಕನಾಡಿಯಾಗಿ ಪಡೀಲಿನ ಜಿಲ್ಲಾಧಿಕಾರಿ ಕಚೇರಿ, ಜಲ್ಲಿಗುಡ್ಡೆಗೂ ಬಸ್ ಸೇವೆ ಆರಂಭಿಸಬೇಕು. ಮೋರ್ಗನ್ಸ್ ಗೇಟ್ ನಿಂದ ಕಂಕನಾಡಿ ವರೆಗೆ ರಸ್ತೆ ಬದಿಯಲ್ಲಿ ಬಸ್ಸು ತಂಗುದಾಣ, ರಿಕ್ಷಾ/ಟೆಂಪೋ ಪಾರ್ಕ್, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ನಗರದ ಕೊಡಿಯಾಲಬೈಲಿನ ಪಾಸ್ ಪೋರ್ಟ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ಸುಸಜ್ಜಿತ ಪಾಸ್ ಪೋರ್ಟ್ ಕಚೇರಿ ಸ್ಥಾಪಿಸಬೇಕು. ಸರಕಾರಿ 70 ವರ್ಷ ಮೇಲ್ಪಟ್ಟ ಯಾವುದೇ ಪೆನ್ಶನ್ ಸಿಗದ ಹಿರಿಯ ನಾಗರಿಕರಿಗೆ 5 ಸಾವಿರ ರೂ. ಗೌರವಧನ ನೀಡಬೇಕು. ದ.ಕ ಮತ್ತು ಉಡುಪಿಯಲ್ಲಿ ನಾಗರಪಂಚಮಿ, ಓಣಂ, ಕೃಷ್ಣ ಜನ್ಮಾಷ್ಟಮಿಯ ಮರುದಿನ ಮತ್ತು ತೆನೆ ಹಬ್ಬಕ್ಕೆ ರಜೆ ನೀಡಬೇಕು. ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಮರು ನಾಮಕರಣ ಮಾಡಬೇಕು ಎಂದು ಅವರು ಆಗಹಿಸಿದರು. ಈ ಕುರಿತ ಮನವಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಹಕಾರಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ವಿವಿಧ ಮುಖಂಡರಿಗೆ ನೀಡಲಾಗಿದೆ ಎಂದರು.
ಪ್ರಮುಖರಾದ ಜಯಪ್ರಕಾಶ್, ಮೀನಾ ಟೆಲ್ಲಿಸ್, ಬಬಿತಾ ಡಿ‘ಸೋಜಾ, ಅಮಿತಾ ನರೋನ್ಹ ಉಪಸ್ಥಿತರಿದ್ದರು.