ನಿವೇಶನ ರಹಿತ ಕೊರಗ ಸಮುದಾಯಕ್ಕೆ ಹಕ್ಕು ಪತ್ರ ನೀಡಿ: ಕರಿಯ ಕೆ.

ನಿವೇಶನ ರಹಿತ ಕೊರಗ ಸಮುದಾಯಕ್ಕೆ ಹಕ್ಕು ಪತ್ರ ನೀಡಿ: ಕರಿಯ ಕೆ.

ಮಂಗಳೂರು: ವಾಮಂಜೂರು ಮಂಗಳಜ್ಯೋತಿಯಲ್ಲಿ ಕೊರಗ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ಮತ್ತು ಹಕ್ಕುಪತ್ರ ತಕ್ಷಣ ವಿತರಣೆಗೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಪಾದಯಾತ್ರೆ-ಅರೆ ಬೆತ್ತಲೆ ಮೆರವಣಿಗೆ ಅ.12ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ವಾಮಂಜೂರು ಘಟಕದ ಸಂಚಾಲಕ ಕರಿಯ ಕೆ. ತಿಳಿಸಿದ್ದಾರೆ.

ಶುಕ್ರವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆ ವಾಮಂಜೂರು ಜಂಕ್ಷನ್ ನಲ್ಲಿ ಪಾದಯಾತ್ರೆ - ಅರೆಬೆತ್ತಲೆ ಮೆರವಣಿಗೆ ಉದ್ಘಾಟನೆಗೊಂಡು ಆರಂಭವಾಗಲಿದೆ. ವಿವಿಧ ಪ್ರಮುಖ ಕೇಂದ್ರಗಳಲ್ಲಿ ಸಭೆಗಳು ನಡೆಯಲಿದೆ. ಅಂತಿಮವಾಗಿ ಪಡೀಲ್ ಜಂಕ್ಷನ್ ನಲ್ಲಿ 1.30ಕ್ಕೆ ಬಹಿರಂಗ ಸಭೆ ನಡೆಯಲಿದೆ. ಆದಿವಾಸಿ ಕೊರಗ ಸಮುದಾಯದ ಸಾಂಸ್ಕೃತಿಕ ಪರಿಕರಗಳೊಂದಿಗೆ ಸಂಚರಿಸುವ ಪಾದಯಾತ್ರೆಯಲ್ಲಿ ವಿವಿಧ ಸಾಮಾಜಿಕ ಹೋರಾಟಗಾರರು, ಮಾನವ ಹಕ್ಕು ಹೋರಾಟಗಾರರು, ಕಾರ್ಮಿಕ ನಾಯಕರು, ವಿದ್ಯಾರ್ಥಿ, ಯುವಜನ ಮಹಿಳಾ ನಾಯಕರು, ಚಿಂತಕರು, ಸಾಹಿತಿಗಳು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮಂಗಳಜ್ಯೋತಿಯಲ್ಲಿ ಆದಿವಾಸಿ ಕೊರಗ ಸಮುದಾಯದ ಸುಮಾರು 33 ಕುಟುಂಬಗಳಿಗೆ ಮನೆ ನಿವೇಶನ ಹಸ್ತಾಂತರ ಪ್ರಕ್ರಿಯೆ 2018ರಿಂದ ಬಾಕಿಯಾಗಿದೆ. 2022ರಿಂದ ಸಮಿತಿ ನೇತೃತ್ವದಲ್ಲಿ ನಿರಂತರವಾಗಿ ಚಳುವಳಿಗಳನ್ನು ನಡೆಸಿ ಸಂಬಂಧಪಟ್ಟವರ ಗಮನ ಸೆಳೆಯಲು ಯತ್ನಿಸಲಾಗಿದೆ. ವಿವಿಧ ಇಲಾಖೆಗಳಿಗೆ, ಮುಖ್ಯಮಂತ್ರಿಗಳಿಗೆ ಕೂಡಾ ಮನವಿ ಸಲ್ಲಿಸಲಾಗಿದೆ. ಇಷ್ಟೆಲ್ಲಾ ಆದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಗಡಿ ಗುರುತು ಮಾಡಿ, ನಿವೇಶನ ಹಂಚಿಕೆ ಮತ್ತು ಹಕ್ಕುಪತ್ರ ಹಸ್ತಾಂತರಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದವರು ಆರೋಪಿಸಿದರು. ಪಾದಯಾತ್ರೆಯ ಬಳಿಕ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದರು. 

ರಾಜ್ಯ ಸಮಿತಿ ಸದಸ್ಯ ಶೇಖರ್ ವಾಮಂಜೂರು, ಪ್ರಮುಖರಾದ ವಿಘ್ನೇಶ್ ವಾಮಂಜೂರು, ಪೂರ್ಣಿಮಾ ಮತ್ತು ಸುನಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article