ಪೌರ ಕಾರ್ಮಿಕರಿಗೆ ಮೀಸಲಿರಿಸಿದ ಜಮೀನು ಕೊರಗ ಸಮುದಾಯಕ್ಕೆ ಹಂಚಿಕೆ ಸಲ್ಲ
ಮಂಗಳೂರು: ಮಂಗಳೂರು ತಾಲೂಕಿನ ಕಡುಪು ಗ್ರಾಮದ ಮಂಗಳಜ್ಯೋತಿಯಲ್ಲಿ ಸರ್ವೆ ನಂ.85/1 ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗಾಗಿ ಮೀಸಲಿರಿಸಿ ಮಂಜೂರು ಮಾಡಿದ ಜಮೀನನ್ನು ಕೊರಗ ಸಮುದಾಯದವರಿಗೆ ಹಂಚಿಕೆ ಮಾಡಬಾರದು ಎಂದು ದ.ಕ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘ ಒತ್ತಾಯಿಸಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಅವರು, 1996-97ರಲ್ಲಿ ಜಮೀನನ್ನು ಪೌರಕಾರ್ಮಿಕರಿಗೆ ಮಂಜೂರು ಮಾಡಲಾಗಿತ್ತು. ಪೌರಕಾರ್ಮಿಕರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೊರಗ ಹಾಗೂ ಇನ್ನಿತರ ಹಿಂದುಳಿದ ವರ್ಗ, ಎಲ್ಲಾ ಜಾತಿಯವರು ಕೂಡ ಇದ್ದಾರೆ. ಅವರಿಗೆ ಮನೆ ಕಟ್ಟಿಕೊಡಲು ಮೀಸಲಿಟ್ಟ ಜಮೀನು ಇದಾಗಿದೆ. ಆದರೆ ಕೊರಗ ಸಂಘಟನೆಯವರು ಈ ವಿಚಾರವನ್ನು ಮುಚ್ಚಿಟ್ಟಿದ್ದಾರೆ. ಆ ಜಮೀನನ್ನು ಕೊರಗ ಸಮುದಾಯದವರಿಗೆ ಮಂಜೂರು ಮಾಡಿಸಿ ಹಕ್ಕುಪತ್ರ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಸಂಘಟನೆಗಳು ಇದಕ್ಕೆ ಒತ್ತಡ ಹಾಕುತ್ತಿವೆ. ಇದಕ್ಕೆ ಪೌರಕಾರ್ಮಿಕರ ಸಂಘದ ಆಕ್ಷೇಪವಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಖಾಯಂ ಪೌರಕಾರ್ಮಿಕರು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಹಾಗಾಗಿ ಆ ಜಮೀನನ್ನು ಪೌರಕಾರ್ಮಿಕರಿಗೆ ಮಾತ್ರ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಎಸ್.ಪಿ. ಆನಂದ ಅವರು ಮಾತನಾಡಿ, ಪೌರಕಾರ್ಮಿಕರಿಗೆ ಮೀಸಲಿಟ್ಟ ಜಾಗವನ್ನು ಕಬಳಿಸಲು ಪ್ರಯತ್ನಿಸುವವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಶೇಖರ್ ಸುರತ್ಕಲ್, ಸುರೇಶ್ ಉರ್ವ, ಸಂಜೀವ ಪಾಂಡೇಶ್ವರ, ಶಶಿಕಲಾ ಕಂಕನಾಡಿ, ವಿಜಯ ಗೋರಿಗುಡ್ಡೆ ಉಪಸ್ಥಿತರಿದ್ದರು.