ಜಿಲ್ಲೆಯಲ್ಲಿ ದಲಿತ ಸಮುದಾಯಗಳಿಗೆ ಮೀಸಲಿಟ್ಟ ಡಿ.ಸಿ.ಮನ್ನಾ ಭೂಮಿಯನ್ನು ಕೂಡಲೇ ಹಂಚಿಕೆ ಮಾಡಬೇಕು: ಬಿಎಸ್ ಪಿ ಒತ್ತಾಯ
Tuesday, October 13, 2026
ಮಂಗಳೂರು: ದ.ಕ. ಜಿಲ್ಲೆಯಲ್ಲಿ ದಲಿತ ಸಮುದಾಯಗಳಿಗೆ ಮೀಸಲಿಟ್ಟ ಡಿ.ಸಿ.ಮನ್ನಾ ಭೂಮಿಯನ್ನು ಕೂಡಲೇ ಹಂಚಿಕೆ ಮಾಡಬೇಕು ಎಂದು ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ಒತ್ತಾಯಿಸಿದೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಅವರು, ಡಿಸಿ ಮನ್ನಾ ಭೂಮಿಯನ್ನು ಹಂಚಿಕೆ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಭೂಮಿ ಹಂಚಿಕೆ ಮಾಡಿಲ್ಲ. ದ.ಕ. ಜಿಲ್ಲೆಯಲ್ಲಿ ಲಭ್ಯವಿರುವ ಸುಮಾರು 229 ಎಕರೆ ಡಿಸಿ ಮನ್ನಾ ಭೂಮಿಯನ್ನು ಕೂಡಲೇ ಪಾರದರ್ಶಕ ರೀತಿಯಲ್ಲಿ ಹಂಚಿಕೆ ಮಾಡಬೇಕು. ಒತ್ತುವರಿಯಾದ ಡಿಸಿ ಮನ್ನಾ ಭೂಮಿಯನ್ನು ಸರ್ವೆ ಮಾಡಿ ಸರಕಾರ ಸ್ವಾಧೀನಕ್ಕೆ ತೆಗೆದುಕೊಂಡು ಅದನ್ನು ದಲಿತರಿಗೆ ಹಂಚಿಕೆ ಮಾಡಬೇಕು. ಡಿ.ಸಿ ಮನ್ನಾ ಭೂಮಿಯನ್ನು ಮಂಜೂರಾತಿ ಮಾಡಲು ಕಾನೂನಿನಲ್ಲಿ ನಿಬಂದನೆಗಳಿದ್ದಲ್ಲಿ ವಿಶೇಷ ನಿಯಮಗಳನ್ನು ಸರಕಾರ ರೂಪಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸೋಮಪ್ಪ ಅಲಂಗಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಶ್ರೀನಿವಾಸ್, ಜಿಲ್ಲಾ ಖಜಾಂಚಿ ಶಶಿಕಲಾ ಎಂ. ಉಪಸ್ಥಿತರಿದ್ದರು.