ಸಂತ ಆಗ್ನೇಸ್ ಕಾಲೇಜಿನ ಪರೀಕ್ಷೆಯ ವಿಚಾರ, ಎಬಿವಿಪಿ ಸಂಘಟನೆಯ ಕಾರ್ಯ ಖಂಡನೀಯ: ಸುಹಾನ್ ಆಳ್ವ
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಮವಾರ ಆಗ್ನೇಸ್ ಕಾಲೇಜಿನವರು ಬೋರ್ಡ್ ಮೀಟಿಂಗ್ ಬಳಿಕ ಪರೀಕ್ಷೆಯ ಕುರಿತು ನಿರ್ಧಾರ ತೆಗದುಕೊಳ್ಳುತ್ತೇವೆ ಎಂದಿದ್ದರು. ಆದರೆ ಈ ನಡುವೆ ಎಬಿವಿಪಿ ಸಂಘಟನೆಯವರು ಕಾಲೇಜಿನ ಮುಂದೆ ಬೆಳಗ್ಗೆ ದಾಂಧಲೆ ಎಬ್ಬಿಸಿದರು ಎಂದು ಆರೋಪಿಸಿದರು.
ಕೆನರಾ ಕಾಲೇಜು, ಶಕ್ತಿನಗರದ ಕಾಲೇಜು ಸೇರಿದಂತೆ ನಾನಾ ಕಡೆಯಲ್ಲಿ ಪರೀಕ್ಷೆ ನಡೆಯುತ್ತಿತ್ತು. ಆದರೆ ಸಂಘಟನೆಯವರು ಅಲ್ಲಿ ಯಾವುದೇ ದಾಂಧಲೆ ಮಾಡಲು ಹೋಗದೇ ಬರೀ ಅಲ್ಪಸಂಖ್ಯಾತರ ಕಾಲೇಜುಗಳನ್ನು ಮಾತ್ರ ಗುರಿ ಮಾಡಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.
ಪೊಲೀಸರ ಅನುಮತಿಯನ್ನು ಪಡೆದುಕೊಳ್ಳದೇ ಪ್ರತಿಭಟನೆ ನಡೆಸಿದರೆ ಪೊಲೀಸರು ಕ್ರಮ ಜರುಗಿಸುತ್ತಾರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸಂತ ಆಗ್ನೇಸ್ ಕಾಲೇಜಿನ ಮುಂಭಾಗದಲ್ಲಿ ನಡೆದ ದಾಂಧಲೆಗೆ ಶಾಸಕ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿ ಅವರ ಕುಮ್ಮಕ್ಕು ನೀಡಿದ ಕಾರಣ ಇಷ್ಟೊಂದು ಗಲಾಟೆಗೆ ಕಾರಣ ವಾಯಿತು. ಸರಕಾರ ಎಬಿವಿಪಿ ಪದಾಧಿಕಾರಿಗಳ ವಿರುದ್ಧ ಕೇಸ್ ಹಾಕಲಿ. ಆದರೆ ವಿದ್ಯಾರ್ಥಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು. ಒಂದು ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಕೈ ಮಾಡಿದ್ದರೆ ಅದು ತಪ್ಪು. ಅವರ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಎನ್ಎಸ್ಯುಐನ ಪದಾಧಿಕಾರಿಗಳಾದ ಸಫ್ವಾನ್, ಸುಕುವಿಂದರ್ ಸಿಂಗ್, ಶಾಹುಲ್, ಪ್ರಜ್ವಲ್, ಪ್ರಜೀತ್, ಸಂತೋಷ್ ಹಾಗೂ ಯು.ಟಿ. ಫರೀದ್ ಉಪಸ್ಥಿತರಿದ್ದರು.